ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ರವರ 138ನೇ ಜನ್ಮ ದಿನಾಚರಣೆ- ವ್ಯಕ್ತಿಗೆ ಜಾತಿ ಮುಖ್ಯವಲ್ಲ, ವ್ಯಕ್ತಿತ್ವ ಮುಖ್ಯ: ಡಾ.ದಿವಾಕರ ಕೊಕ್ಕಡ

0

ಉಜಿರೆ: ಯಾವುದೇ ವ್ಯಕ್ತಿಗೆ ಜಾತಿ ಮುಖ್ಯವಲ್ಲ, ವ್ಯಕ್ತಿತ್ವ ಮುಖ್ಯ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಭಾಗಿತ್ವದಲ್ಲಿ ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಅ.25ರಂದು ಆಯೋಜಿಸಲಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ರವರ 138ನೇ ಜನ್ಮ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇಸ್ಮಾಯಿಲ್ ಮೂಲತಃ ಪರ್ಶಿಯನ್ ಆದರೂ ಕನ್ನಡ ಹಾಗೂ ಸಂಸ್ಕೃತ ಭಾಷಾ ಪ್ರೇಮಿಯಾಗಿದ್ದರು.ಅವರು ತಮ್ಮ ರಾಷ್ಟ್ರಭಕ್ತಿಯ ಮೂಲಕ ಸಮಗ್ರ ಶಾಂತಿ ಸ್ಥಾಪನೆಯ ಮೂಲಕ ಮೈಸೂರು ರಾಜ್ಯದ ಸುವರ್ಣಯುಗಕ್ಕೆ ಸಾಕ್ಷಿಯಾದ ದಿವಾನರಾಗಿದ್ದು, ವ್ಯಕ್ತಿಗೆ ಜಾತಿಗಿಂತ ವ್ಯಕ್ತಿತ್ವ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ಅವರು ಕನ್ನಡ ನಾಡಿನ ತ್ರಿಮೂರ್ತಿಗಳು ಎಂದು ಡಾ. ದಿವಾಕರ ಕೊಕ್ಕಡ ಬಣ್ಣಿಸಿದರು. ಇಸ್ಮಾಯಿಲ್ ರ ಸಾಧನೆಗಳನ್ನು ಸ್ಮರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ನಮ್ಮ ಕಾಲೇಜಿನ ಕನ್ನಡ ವಿಭಾಗವು ನಿರಂತರ ಚಟುವಟಿಕೆಯಿಂದ ಕೂಡಿದ್ದು, ನಮ್ಮ ನಾಡು ನುಡಿ ಸಂಸ್ಕೃತಿಗೆ ಮಿರ್ಜಾ ಇಸ್ಮಾಯಿಲ್ ಅವರ ಧೀಶಕ್ತಿ, ಯೋಜನಾ ಶಕ್ತಿಯನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಎಂ.ಪಿ. ಶ್ರೀನಾಥ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಮಿರ್ಜಾ ಇಸ್ಮಾಯಿಲ್ ಅವರು ಯುವಪೀಳಿಗೆಗೆ ಸ್ಫೂರ್ತಿ. ಕರ್ನಾಟಕದ ಅಭಿವೃದ್ಧಿಗೆ ಅವರ ಕೊಡುಗೆ ಮಹತ್ವದ್ದು ಎಂದರು.

ಕನ್ನಡ ವಿಭಾಗ ಮುಖ್ಯಸ್ಥೆ ಡಾ|ಬೋಜಮ್ಮ ಕೆ.ಎನ್., ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಡಾ|ಎಂ.ಪಿ. ಶ್ರೀನಾಥ ಸ್ವಾಗತಿಸಿ, ಪ್ರಾಧ್ಯಾಪಕ ಮಹೇಶ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here