ಧರ್ಮಸ್ಥಳ: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಬಳಿಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಇತ್ತಂಡದವರು ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.19 ರಂದು ಸಂಜೆ ಚಾರ್ಮಾಡಿ ಘಾಟಿಯ 3 ನೇ ತಿರುವಿನಲ್ಲಿ, ವಿಟ್ಲ ಸಮೀಪದ ಕೇಪು ನಿವಾಸಿ ಮನೋಜ್ (26ವ) ಎಂಬವರು ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದಾಗ ನೋಂದಣಿಯಾಗದ ಬಿಳಿ ಬಣ್ಣದ ಮಾರುತಿ ಸುಜುಕಿ ಎರಿಟಿಗಾ ಕಾರನ್ನು ಅದರ ಚಾಲಕ ನಿರ್ಲಕ್ಷತನದಿಂದ ಚಲಾಯಿಸಿ, ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತವೆಸಗಿದ್ದು, ಈ ಘಟನೆಯ ಬಗ್ಗೆ ಚಾರ್ಮಾಡಿ ಘಾಟಿಯ 1ನೇ ತಿರುವಿನ ಬಳಿ, ಮಾತುಕತೆ ಮೂಲಕ ಇತ್ಯರ್ಥಪಡಿಸುತ್ತಿದ್ದಾಗ, ಅಪಘಾತಪಡಿಸಿದ ಕಾರಿನಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ. 80/2023 ಕಲಂ:279,323,504, ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇನ್ನೊಂದು ತಂಡದ ದೂರು: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮರಡಿಕೆರೆ ಗ್ರಾಮ, ಅರಸಿಕೆರೆ, ಹಾಸನ ನಿವಾಸಿ ಲೋಲಮ್ಮ (48) ಎಂಬವರು ಸದರಿ ಬೈಕ್ ಸವಾರ ಹಾಗೂ ಸಹಸವಾರನ ವಿರುದ್ದ ಅಪಘಾತದ ಬಗ್ಗೆ ಹಾಗೂ ಆ ಬಳಿಕ ಕಾರಿನಲ್ಲಿದ್ದ ಲೋಲಮ್ಮ ರವರ ಮಗ ಹಾಗೂ ಪತಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 81/2023 ಕಲಂ:279,341,323, 504,506 ಜೊತೆಗೆ 34 ಐಪಿಸಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.