ಮುಂಡಾಜೆ: “ಶಾಲಾ-ಕಾಲೇಜುಗಳಲ್ಲಿ ಬೋಧಿಸಲ್ಪಡುವ ಶಿಕ್ಷಣವು ವಿದ್ಯಾರ್ಥಿಗಳನ್ನು ಅಕ್ಷರಸ್ಥರನ್ನಾಗಿ ಮಾಡುತ್ತದೆ.ಆದರೆ ಎನ್ಎಸ್ಎಸ್ ನಂತಹ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡಿ ಜೀವನ ಶಿಕ್ಷಣವನ್ನು ನೀಡುತ್ತದೆ” ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿನ ಸಹಪ್ರಾಧ್ಯಾಪಕ ಡಾ. ರವಿ ಎಂ ಎನ್ ಹೇಳಿದರು.
ಅವರು ಅ.18ರಂದು ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಮುಂಡಾಜೆ ಇಲ್ಲಿ ನಡೆಯುತ್ತಿರುವ ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಭಾಷಣ ಮಾಡಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆ ಇದರ ಕಾರ್ಯದರ್ಶಿ ನಾರಾಯಣ ಗೌಡ ಕೊಳಂಬೆ ವಹಿಸಿದ್ದರು.
ಶಿಬಿರಾಧಿಕಾರಿ ಹಾಗೂ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಯಾಗಿರುವ ನಮಿತಾ ಕೆ ಆರ್ ವರದಿ ವಾಚಿಸಿದರು.
ಶಿಬಿರ ಸಮಿತಿಯ ಉಪಾಧ್ಯಕ್ಷ ಹಾಗೂ ಸಿಎ ಬ್ಯಾಂಕ್ ಮುಂಡಾಜೆ ಇದರ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ಮತ್ತು ಶಿಬಿರಾರ್ಥಿಗಳಾದ ಪುಣ್ಯಶ್ರೀ ಹಾಗೂ ಧನುಷ್ ಕೆಎನ್ ಅನಿಸಿಕೆ ವ್ಯಕ್ತಪಡಿಸಿದರು.
ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ, ಶಿಬಿರ ನಿರ್ವಹಣಾ ಸಮಿತಿಯ ಅಧ್ಯಕ್ಷ ಬಾಬು ಪೂಜಾರಿ ಕೂಳೂರು, ಪ್ರಾಂಶುಪಾಲೆ ಜಾಲಿ ಓಎ, ಮುಂಡಾಜೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಂತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಂಗ್ಲ ಭಾಷಾ ಉಪನ್ಯಾಸಕ ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು.ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಚಂದ್ರಮತಿ ಧನ್ಯವಾದ ಸಮರ್ಪಿಸಿದರು.ರಾಜ್ಯಶಾಸ್ತ್ರ ಉಪನ್ಯಾಸಕ ಸುಭಾಷ್ ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.