ಧರ್ಮಸ್ಥಳ: ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಸಂಸ್ಥೆಯು ರಾಜ್ಯಾದ್ಯಂತ ಪುನಶ್ಚೇತನಗೊಳಿಸಿದ 622 ಕೆರೆ ಸಮಿತಿಯ 6000ಕ್ಕೂ ಮಿಕ್ಕಿದ ಪದಾಧಿಕಾರಿಗಳಿಗೆ ಆಯಾ ಜಿಲ್ಲಾ ಮಟ್ಟದಲ್ಲಿ ಪ್ರಸ್ತುತ ವರ್ಷ ಪ್ರೇರಣಾ ಕಾರ್ಯಗಾರವನ್ನು ನಡೆಸುವುದರ ಮೂಲಕ ಕೆರೆ ಸಮಿತಿಗಳನ್ನು ಬಲವರ್ಧನೆಗೊಳಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್.ಎಚ್.ಮಂಜುನಾಥ್‌ರವರು ತಿಳಿಸಿದರು.
ಕೆರೆಗಳು ನೀರಿನ ಸಂಗ್ರಹ ಮೂಲ, ಅಂತರ್ಜಲ ಹೆಚ್ಚಿಸುವ ಪಾತ್ರೆ, ಪ್ರಾಣಿ, ಪಕ್ಷಿ, ಜೀವ ಸಂಕುಲಗಳ ಜೀವನಾಡಿ. ಇಂತಹ ಕೆರೆಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಮುಖ್ಯ ಜವಾಬ್ದಾರಿಯಾಗಿರುತ್ತದೆ. ಆದರೆ ಅದೆಷ್ಟೋ ಕೆರೆಗಳು ತಮ್ಮ ನೀರಿನ ಸಂಗ್ರಹಣಾ ಸಾಮಾರ್ಥ್ಯವನ್ನು ಕಳೆದುಕೊಂಡಿವೆ. ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದು ಕೆರೆ ಮುಚ್ಚಿದೆ ಹಾಗೂ ಹೂಳು ತುಂಬಿಕೊಂಡಿವೆ. ಮರಳು, ಮಣ್ಣಿಗಾಗಿ ಕೆರೆಯ ಒಡಲನ್ನು ಅಗೆದು ವಿರೂಪಗೊಳಿಸಲಾಗಿದೆ. ಒತ್ತುವರಿಯಿಂದಾಗಿ ನೀರು ಹರಿದು ಬರುತ್ತಿದ್ದ ಕಾಲುವೆಗಳು ಇಲ್ಲದಂತಾಗಿದೆ. ಹನಿ ನೀರಿಗಾಗಿ ಪರದಾಡುತ್ತಿರುವ ರೈತರ ಹಾಗೂ ನೀರಿಗಾಗಿ ಬಹಳ ದೂರದವರೆಗೆ ಅಲೆಯುತ್ತಿರುವ ಮಹಿಳೆಯರ ಸಂಕಷ್ಟ ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವಿ ಹೆಗ್ಗಡೆಯವರು ಪಾರಂಪರಿಕ ಕೆರೆಗಳ ಪುನಶ್ಚೇತನಕ್ಕಾಗಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮವನ್ನು 2016ರಲ್ಲಿ ಪ್ರಾರಂಭಿಸಿದರು. ಇದರಂತೆ ಇದುವರೆಗೆ ರಾಜ್ಯಾದ್ಯಂತ 622 ಕೆರೆಯ ಪುನಶ್ಚೇತನ ಕಾರ್ಯ ನಡೆಸಲಾಗಿದೆ.
ಪ್ರೇರಣಾ ಕಾರ್ಯಗಾರದಲ್ಲಿ ಅಳವಡಿಸಿಕೊಳ್ಳಲಾಗುವ ವಿಷಯಗಳು:
> ಕೆರೆಯ ಶಾಶ್ವತ ನಿರ್ವಹಣೆಯ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
> ಕೆರೆ ಸಮಿತಿಯನ್ನು ಸರಕಾರದ ನಿಯಮದಡಿ ನೊಂದಾವಣೆ ಮಾಡಿಕೊಳ್ಳಲು ಮಾಹಿತಿ ನೀಡಲಾಗುತ್ತಿದೆ.
> ಕೆರೆ ಅಭಿವೃಧ್ಧಿಗಾಗಿ ಸರಕಾರದ ವಿವಿಧ ಇಲಾಖೆಗಳ ಅನುದಾನಗಳ ಮಾಹಿತಿ ನೀಡಲಾಗುತ್ತಿದೆ.
> ಇತರ ಸಂಘ ಸಂಸ್ಥೆಗಳಿಂದ ಅನುದಾನ ಪಡೆದು ಅಭಿವೃದ್ಧಿ ಕಾರ್ಯ ನಡೆಸಲು ಪ್ರೇರಣೆ ನೀಡಲಾಗುತ್ತಿದೆ.
> ಕೆರೆಗಳಲ್ಲಿ ಅಭಿವೃಧ್ಧಿ ಪಡಿಸಬೇಕಾದ ಕಾರ್ಯಗಳ ಪಟ್ಟಿ ತಯಾರಿಸಿ ಕ್ರಿಯಾಯೋಜನೆ ಹಾಕಲಾಗುತ್ತಿದೆ.
> ಕೆರೆಗಳ ಹಸಿರೀಕರಣಕ್ಕಾಗಿ ಗಿಡನಾಟಿಗೆ ಯೋಜನೆ ರೂಪಿಸಲಾಗುತ್ತಿದೆ.
> ಕೆರೆಯಲ್ಲಿ ಹಾಗೂ ಸುತ್ತಮುತ್ತ ಮಲಿನ ಮಾಡದಂತೆ ಸ್ವಚ್ಚತೆಯ ಅರಿವು ಮೂಡಿಸಲಾಗುತ್ತಿದೆ.
> ವರಮಾನವನ್ನು ಹೆಚ್ಚಿಸಲು ಆದಾಯೋತ್ಪನ್ನ ಚಟುವಟಿಕೆಗಳನ್ನು ನಡೆಸುವಂತೆ ಮಾಹಿತಿ ನೀಡಲಾಗುತ್ತಿದೆ.
> ಕೆರೆಗಳ ಅತಿಕ್ರಮಣ ತಡೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
> ಮರಳು ಮಣ್ಣಿಗಾಗಿ ಕೆರೆಗಳನ್ನು ಹಾಳುಗೆಡವದಂತೆ ತಡೆಯುವ ಕುರಿತು ತಿಳುವಳಿಕೆ ಮೂಡಿಸಲಾಗುತ್ತಿದೆ.
> ಕೆರೆ ಅಭಿವೃದ್ಧಿಗಾಗಿ ಇರುವ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಅವಕಾಶಗಳ ಬಗ್ಗೆ ಜಲ ತಜ್ಞರಿಂದ ಹಾಗೂ ಇಲಾಖಾಅಧಿಕಾರಿಗಳಿಂದ ಮಾರ್ಗದರ್ಶನ ನೀಡಲಾಗುತ್ತಿದೆ.
> ಪ್ರತೀ ವರ್ಷ ಕೆರೆ ತುಂಬಿದ ಸಂದರ್ಭ ಕೆರೆಗೆ ಬಾಗಿನ ಅರ್ಪಣೆ, ಗಂಗಾ ಪೂಜೆ, ಕೆರೆಯಂಗಳದಲ್ಲಿ ಒಂದು ದಿನ ಮೊದಲಾದ ಕಾರ್ಯಕ್ರಮ ನಡೆಸಲು ಪ್ರೇರೆಪಿಸಲಾಗುತ್ತಿದೆ.
> ಕೆರೆ ಸಮಿತಿ ಸದಸ್ಯರಿಗೆ ಪ್ರೇರಣೆಯಾಗುವ ನೆಲೆಯಲ್ಲಿ ಜಿಲ್ಲೆಯ ಅತ್ಯುನ್ನತ ಕೆರೆ ಸಮಿತಿಯನ್ನು ಗುರುತಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುತ್ತಿದೆ.
ನಮ್ಮೂರು ನಮ್ಮ ಕೆರೆ ಕಾರ್ಯಕ್ರಮವು ಸಮುದಾಯದ ಸಹಭಾಗಿತ್ವದಲ್ಲಿ ನಡೆಯುವ ಕೆರೆ ಪುನಶ್ಚೇತನದ ಕಾರ್ಯಕ್ರಮವಾಗಿದ್ದು ಕೆರೆ ಸಮಿತಿ ಸದಸ್ಯರ ಪ್ರೇರಣಾ ಕಾರ್ಯಗಾರಗಳಿಂದ ಕೆರೆಯ ಶಾಶ್ವತ ಉಳಿವಿನ ಪ್ರಯತ್ನದೊಂದಿಗೆ ಸಂರಕ್ಷಣೆಯ ಬಹುಮುಖ್ಯ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್.ಎಚ್. ಮಂಜುನಾಥ್ ಹೇಳಿದರು.