ಹೊಸಂಗಡಿ: ಗ್ರಾಮ ಪಂಚಾಯತ್ ಹೊಸಂಗಡಿ, ಅರಣ್ಯ ಇಲಾಖೆ ವೇಣೂರು, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಟಾನ ಹೊಸಂಗಡಿ, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ, ಇನ್ನರ್ ವೀಲ್ ಕ್ಲಬ್ ಮೂಡಬಿದ್ರೆ, ಫ್ರೆಂಡ್ಸ್ ಕ್ಲಬ್ ಹೊಸಂಗಡಿ,ಆಳ್ವಾಸ್ ಸಮಾಜ ಕಾರ್ಯ ಕಾಲೇಜು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಗಳು, ಅಂಗನವಾಡಿಗಳ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ನೆಲ ಜಲ ಸಂರಕ್ಷಣೆಗಾಗಿ ನನ್ನ ಗಿಡ ನನ್ನ ಮರ ಮತ್ತು ನನ್ನ ನೆಲ ನನ್ನ ಜಲ ಎಂಬ ವಿನೂತನ ಸಪ್ತಾಹ ಕಾರ್ಯಕ್ರಮಕ್ಕೆ ಸೆ.26 ರಂದು ಶಾಸಕ ಹರೀಶ್ ಪೂಂಜಾ ಚಾಲನೆ ನೀಡಿ ನೆಲ ಜಲ ಸಂರಕ್ಷಣೆಗೆ ಹೊಸಂಗಡಿ ಪಂಚಾಯತ್ ನ ಕ್ರಮವನ್ನು ಶ್ಲಾಘಿಸಿದರು ಮತ್ತು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಅಂತರ್ಜಲ ವೃದ್ಧಿಗಾಗಿ ಮತ್ತು ಶಾಶ್ವತ ನೀರಾವರಿಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು.ಯುವಕರು ಸಮಗ್ರ ಕೃಷಿ ಮಾಡುವಂತೆ ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವೇಣೂರು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ ಮಾತನಾಡಿ ಹೊಸಂಗಡಿ ಗ್ರಾಮ ಪಂಚಾಯತ್ ನ ಮಾದರಿ ಕಾರ್ಯಕ್ರಮಗಳಿಗೆ ಪೂರ್ಣ ಸಹಕಾರ ನೀಡುವ ಭರವಸೆ ಇತ್ತರು.
ರೋಟರಿ ಜಿಲ್ಲೆ 3181 ನ ಸಹಾಯಕ ಗವರ್ನರ್ ರೋ. ರಾಘವೇಂದ್ರ ಭಟ್ ನೀರಿನ ಮಿತಬಳಕೆ ಮತ್ತು ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ಮೂಡಬಿದಿರೆ ಬ್ಯಾಂಕ್ ಒಫ್ ಬರೋಡದ ಮ್ಯಾನೇಜರ್ ಸಂತೋಷ್ ಕುಮಾರ್ ಮಾತನಾಡಿ ನೆಲ ಜಲ ಸಂರಕ್ಷಣೆಯ ಔಚಿತ್ಯದ ಬಗ್ಗೆ ವಿವರಿಸಿದರು.
ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷ ಸರಿತಾ ಆಶೀರ್ವಾದ್ ರವರು ಸಪ್ತಾಹಕ್ಕೆ ಶುಭ ಹಾರೈಸಿದರು.ಪಂಚಾಯತ್ ಉಪಾಧ್ಯಕ್ಷೆ ಶಾಂತಾ, ಪಂಚಾಯತ್ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮದ ರೈತರು ಭಾಗವಹಿಸಿದ್ದರು.
ಪಂಚಾಯತ್ ಸದಸ್ಯ ಕರುಣಾಕರ ಪೂಜಾರಿ ಸ್ವಾಗತಿಸಿದರು.ಸದಸ್ಯ ಹರಿಪ್ರಸಾದ್ ಸಪ್ತಾಹದ ಉದ್ದೇಶ ಮತ್ತು ಔಚಿತ್ಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಎಲ್ಲ ರೈತರಿಗೆ ಸಾಂಕೇತಿಕವಾಗಿ ಗಿಡ ಗಳನ್ನು ವಿತರಿಸಲಾಯಿತು.
ಸೆ.26 ರಿಂದ ಅ.2 ರವರಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಲೆಗಳು, ಅಂಗನವಾಡಿಗಳ, ಸಾರ್ವಜನಿಕ ಸ್ಥಳಗಳಲ್ಲಿ ನೆಲ ಜಲ ಸಂರಕ್ಷಣೆಗಾಗಿ ಗಿಡಗಳ ಪುನಶ್ಚೇತನ, ಗಿಡ ನೆಡುವುದು, ಅರಿವು ಕಾರ್ಯಕ್ರಮಗಳು, ಮಕ್ಕಳಿಗೆ ಸ್ಪರ್ಧೆಗಳು, ಸ್ವಚ್ಛತಾ ಕಾರ್ಯಕ್ರಮಗಳು, ಯುವಕರಿಗೆ, ಮಹಿಳೆಯರಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ವಿವಿಧ ಸಂಘ ಸಂಸ್ಥೆಗಳು ಹಾಗೂ ಜನರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮ ರೂಪಿಸಲಾಗಿದೆ.ಅಕ್ಟೋಬರ್ 2 ರಂದು ಗಾಂಧೀ ಜಯಂತಿ ಯಂದು ಪೇರಿ ಯಲ್ಲಿರುವ ಪ್ರೇರಣಾ ಸೌಧದಲ್ಲಿ ನಡೆಯುವ ವಿಶೇಷ ಗ್ರಾಮಸಭೆ ಯೊಂದಿಗೆ ಸಪ್ತಾಹ ಸಂಪನ್ನಗೊಳ್ಳಲಿದೆ.