ಉಜಿರೆ: ಕಳೆದ ಎರಡು ವರ್ಷಗಳಿಂದ ಎಡ ಬದಿಯ ಸೊಂಟ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಪರಿಷ್ಕೃತ ಸೊಂಟದ ಕೀಳು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ಹಿಂದೆ ಇದೇ ಮಹಿಳೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೂ ಮಹಿಳೆಗೆ ಸೊಂಟ ನೋವು ವಾಸಿಯಾಗದೇ ಇದ್ದಾಗ ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದರು.
ರೋಗಿಯನ್ನು ಕೂಲಂಕುಷವಾಗಿ ಪರೀಕ್ಷಿದ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ. ಶತಾನಂದ ಪ್ರಸಾದ್ ರಾವ್ ಮತ್ತು ಡಾ. ಹರೀಶ್ ಇವರು ಮಂಗಳೂರಿನಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಯಿಂದ ಆಗಿರುವ ತೊಂದರೆಯಿಂದಾಗಿ ಹಳೆಯ ಹಿಪ್ ಸಂಪೂರ್ಣ ತೆಗೆದು ಹೊಸ ಹಿಪ್ ಅಳವಡಿಸಲು 2 ಹಂತದ ಶಸ್ತ್ರಚಿಕಿತ್ಸೆ ನಡೆಸಬೇಕಾದ ಅನಿವಾರ್ಯತೆಯನ್ನು ರೋಗಿಗೆ ಮನದಟ್ಟು ಮಾಡಿಸಿದರು.ಮೊದಲ ಹಂತದಲ್ಲಿ ಸತತ 7
ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಹಳೆಯ ಸರ್ಜಿಕಲ್ ಹಿಪ್ ತೆಗೆದು, ಸೋಂಕು ತಗಲಿರುವ ಭಾಗಗಳನ್ನು ಸಂಪೂರ್ಣ ಶುಚಿಗೊಳಿಸಿ ಬಳಿಕ ಆಂಟಿಬಯೋಟಾ ಸಿಮೆಂಟ್ ಹಾಕಿ ಫಿಲ್ ಮಾಡಲಾಯಿತು.
ಇದಾದ ಒಂದೂವರೆ ತಿಂಗಳ ಬಳಿಕ 2ನೇ ಹಂತದಲ್ಲಿ ರೋಗಿಗೆ ಪರಿಷ್ಕೃತ ಹಿಪ್ ರಿಪ್ಲೆಸ್‌ಮೆಂಟ್ ಮಾಡಲಾಯಿತು. ಮಂಗಳೂರಿನ ಕೆ.ಎಸ್. ಹೆಗ್ಡೆ ಬೋನ್ ಬ್ಯಾಂಕ್‌ನಿಂದ ಬದಲಿ ಹಿಪ್ ತರಿಸಿ 10 ಗಂಟೆಗಳ ಸತತ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅರೆವಳಿಕೆ ತಜ್ಞರಾದ ಡಾ| ಸುಪ್ರೀತ್ ಆರ್ ಶೆಟ್ಟಿ ಸಹಕರಿಸಿದರು.ಈ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ರೋಗಿ ಗುಣಮುಖರಾಗಿದ್ದು, ಇದೊಂದು ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಅಭೂತಪೂರ್ವ ಸಾಧನೆಯಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ತಿಳಿದರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಸಾಧನೆ ಮತ್ತು ಹೈಟೆಕ್ ಆಸ್ಪತ್ರೆಗಳಲ್ಲಿ ದೊರೆಯುವ ವೈದ್ಯಕೀಯ ಸೇವೆ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಗಳು ಗ್ರಾಮೀಣ ಜನತೆಗೆ ಮಿತದರದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಬಗ್ಗೆ ಡಾ| ಡಿ. ವೀರೇಂದ್ರ ಹೆಗ್ಗಡೆ, ಮಾತೃಶ್ರೀ ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಸಂತೋಷ ವ್ಯಕ್ತಪಡಿಸಿದರು ಎಂದು ಅವರು ತಿಳಿಸಿದ್ದಾರೆ.