ಬೆಳ್ತಂಗಡಿ: ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿರುವ ಉಜಿರೆ ಎಸ್.ಡಿ.ಎಂ. ಕಾಲೇಜು ವಿದ್ಯಾರ್ಥಿನಿ ಕು.ಸೌಜನ್ಯರವರ ಪ್ರಕರಣದ ಮರು ತನಿಖೆ ನಡೆಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸೆ. 8ರಂದು ಹೈಕೋರ್ಟಿನಲ್ಲಿ ನಡೆಯಲಿದೆ.
ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಗಳಾದ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯರವರನ್ನು ಅಪಹರಿಸಿ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ, ಸಿಐಡಿ ಮತ್ತು ಸಿಬಿಐಯಿಂದ ತನಿಖೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಕಾರ್ಕಳದ ಸಂತೋಷ್ ರಾವ್ ನಿರಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿತ್ತು. ಬಳಿಕ ಸೌಜನ್ಯ ಪರ ಪ್ರತಿಭಟನೆಯ ಕಾವು ಜೋರಾಗತೊಡಗಿದೆ. ನಿಜವಾದ ಅಪರಾಧಿಗಳನ್ನು ಬಂಧಿಸಬೇಕು, ತನಿಖೆಯ ಆರಂಭದಲ್ಲಿ ಲೋಪ ಎಸಗಿರುವ ತನಿಖಾಧಿಕಾರಿ ಮತ್ತು ವೈದ್ಯಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಗುತ್ತಿದೆ.ಈ ಮಧ್ಯೆ ಪ್ರಕರಣದ ಮರು ತನಿಖೆ ನಡೆಸಬೇಕು ಎಂದು ಸರಕಾರಕ್ಕೆ ಮನವಿ ಮಾಡಲಾಗಿದೆ.ಈ ಮಧ್ಯೆ ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಗಿರೀಶ ಭಾರಧ್ವಾಜ್, ನವೀನ್ ಕುಮಾರ್ ನೆರಿಯ ಬೆಳ್ತಂಗಡಿ ಮತ್ತು ವಿನಾಯಕ ಫ್ರೆಂಡ್ಸ್ ಟ್ರಸ್ಟ್ ಬಲ್ನಾಡು ಪುತ್ತೂರು ಇವರು ಒಟ್ಟಾಗಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೆ.8ರಂದು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಲಿದ್ದಾರೆ.