ಬೆಳ್ತಂಗಡಿ: ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಮಣ್ಣಸಂಕದಲ್ಲಿ ಅತ್ಯಾಚಾರಕ್ಕೀಡಾಗಿ ಬರ್ಬರವಾಗಿ ಕೊಲೆಯಾಗಿರುವ ಧರ್ಮಸ್ಥಳ ಪಾಂಗಳ ನಿವಾಸಿ, ಉಜಿರೆ ಎಸ್.ಡಿ.ಎಂ.ಕಾಲೇಜು ವಿದ್ಯಾರ್ಥಿನಿ ಕು. ಸೌಜನ್ಯರವರ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಆಗಸ್ಟ್ 27ರಂದು ಬೆಳ್ತಂಗಡಿಯ ತಾಲೂಕು ಕಚೇರಿ ಮುಂಭಾಗದಲ್ಲಿ ದ.ಕ. ಸಂಸದರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬಿಜೆಪಿ ಶಾಸಕರಿಂದ ನಡೆಯಲಿರುವ ಪ್ರತಿಭಟನೆಗೆ ಕ್ಷಣಗಣನೆ ಆರಂಭಗೊಂಡಿದೆ.
ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗಿಯಾಗುವ ನಿರೀಕ್ಷೆ ಇದ್ದು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸೌಜನ್ಯರವರ ತಾಯಿ ಕುಸುಮಾವತಿ ಚಂದಪ್ಪ ಗೌಡರವರನ್ನು ಬಿಜೆಪಿ ನಾಯಕರು ಪ್ರತಿಭಟನೆಗೆ ಆಹ್ವಾನಿಸಿದ್ದು ಅವರು ಪ್ರತಿಭಟನೆಯಲ್ಲಿ ಭಾಗಿಯಾಗುವರೇ, ಇಲ್ಲವೇ ಎಂದು ಕುತೂಹಲ ಸೃಷ್ಠಿಸಿದೆ. ಸೌಜನ್ಯಗೆ ನ್ಯಾಯ ದೊರೆಯಬೇಕು ಎಂದು ಒತ್ತಾಯಿಸಿ ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್ ಪಾದಯಾತ್ರೆಯಲ್ಲಿ ಕುಸುಮಾವತಿ ಭಾಗಿಯಾಗಿದ್ದಾರೆ.