ಪಟ್ಟೂರು: ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ವಿಷ್ಣುಮೂರ್ತಿ ವರ್ತುಲ ಕಾರ್ಯಾಗಾರ

0

ಪಟ್ಟೂರು: ಭಾಷೆಯ ಮೇಲಿನ ಕೀಳರಿಮೆ, ಭಯವನ್ನು ಧೈರ್ಯದಿಂದ ಹೋಗಲಾಡಿಸಿದಾಗ ಮಾತ್ರ ಒಂದು ಭಾಷೆಯನ್ನು ಕಲಿಯಲು ಸಾಧ್ಯ. ಕಲಿಯುವ ಛಲ, ಹಂಬಲ ಇದ್ದಾಗ ಎಂತಹ ಕಷ್ಟವಾದ ಭಾಷೆಯು ಸುಲಭೀಕರಣಗೊಳ್ಳುತ್ತದೆ.ಸಭಾ ಕಂಪನ ಎನ್ನುವುದು ಎಲ್ಲರಲ್ಲೂ ಕಂಡು ಬರುವ ಸಾಮಾನ್ಯ ವಿಷಯವಾಗಿದ್ದು, ನಾವು ಭಯ ಬಿಟ್ಟು ಪರಿಣಾಮಕಾರಿಯಾಗಿ ಸಂವಹನವನ್ನು ಪ್ರಾರಂಭಿಸಬೇಕು. ನಮ್ಮ ಕಂಫರ್ಟ್ ಝೋನ್‌ನಿಂದ ಹೊರ ಬಂದು ಪೂರ್ವ ತಯಾರಿಯ ಮೂಲಕ ಕೇವಲ ಮಾತೃಭಾಷೆಯನ್ನು ಮಾತ್ರ ಅವಲಂಬಿತವಾಗದೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಹೆಚ್ಚು ಬಳಕೆಯಾಗುವ ಭಾಷೆಯನ್ನು ಕಲಿಯುವಂತಾಗಬೇಕು.

ಆರಂಭಿಕ ಪ್ರಯತ್ನದ ಫಲವು ಶೂನ್ಯವಾಗುತ್ತಿದ್ದರು ಪಟ್ಟು ಬಿಡದೆ ಮರಳಿ ಯತ್ನ ಮಾಡುತ್ತಾ ಹೋದಾಗ ಅತ್ಯುನ್ನತ ಫಲಿತಾಂಶ ಸಿಕ್ಕೆ ಸಿಗುತ್ತದೆ ಆ ರೀತಿಯ ಆತ್ಮವಿಶ್ವಾಸ ನಮ್ಮಲ್ಲಿಟ್ಟುಕೊಳ್ಳಬೇಕು ಎಂದು ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ಬಿ ಆರ್ ಹೇಳಿದರು.

ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ನಡೆದ ವಿಷ್ಣುಮೂರ್ತಿ ವರ್ತುಲ ಕಾರ್ಯಾಗಾರದಲ್ಲಿ ಇಂಗ್ಲೀಷ್ ಸಂವಹನ ಮಾಲಿಕೆ ಭಾಗ-೧ ವಿಷಯದ ಕುರಿತು ತರಬೇತಿ ನೀಡಿದರು.ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಬೆಳ್ಳಾರೆ ಸ.ಪ.ಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ್ ಶಿಕ್ಷಕರ ನೆಲೆ ಮತ್ತು ಬೆಲೆ ಎಂಬ ವಿಷಯದ ಕುರಿತು ಮಾತನಾಡುತ್ತಾ ಶಿಕ್ಷಕರಿಗೆ ವಿದ್ಯಾರ್ಥಿಗಳೇ ಆಸ್ತಿ.

ಹಿಂದಿನ ಕಾಲದಲ್ಲಿ ಶಿಕ್ಷಕ ಪ್ರಧಾನ ಶಿಕ್ಷಣ ಇತ್ತು. ಆದರೆ ಈಗ ವಿದ್ಯಾರ್ಥಿ ಪ್ರಧಾನ ಶಿಕ್ಷಣ ಇದೆ.ಶಿಕ್ಷಕರು ಗುರು ಎಂದು ಹೇಳಿಸಿಕೊಳ್ಳದೆ ಸಹಾಯಕ ಎಂದು ಹೇಳೀಸಿಕೊಳ್ಳುತ್ತಿದ್ದಾನೆ. ಈಗಿನ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ವಿಷಯಕ್ಕೆ ಸಂಬಂಧಿಸಿದ ಆಕರ ಗ್ರಂಥಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಬೇಕಾದ ವಿಷಯಗಳನ್ನು ಹುಡುಕಲು ಹೇಳುವುದು, ಗೊತ್ತಿಲ್ಲದಿದ್ದರೆ ವಿದ್ಯಾರ್ಥಿಗಳು ಶಿಕ್ಷಕರ ಬಳಿ ಕೇಳಿದ ಬಳಿಕ ಶಿಕ್ಷಕರು ಮಾರ್ಗದರ್ಶನ ನೀಡಬೇಕು.ಇದರಿಂದ ವಿದ್ಯಾರ್ಥಿಗಳಿಗೆ ಸ್ವಕಲಿಕೆಗೆ ಅವಕಾಶ ದೊರೆತಂತಾಗುತ್ತದೆ ಎಂದರು.ಹೆತ್ತವರ ಅನುಪಸ್ಥಿತಿಯಲ್ಲಿ ಶಿಕ್ಷಕರು ಪೋಷಕರ ರೀತಿಯಲ್ಲಿ ವಿದ್ಯಾರ್ಥಿಗಳನ್ನು ನೋಡಿಕೊಳ್ಳಬೇಕು.ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಮಾನಸಿಕ ಅಂತರ ಕಡಿಮೆಯಾಗಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಶಿಕ್ಷಕರ ಬೆಲೆ ತಿಳಿಯುವುದು ಅವರಿಂದ ಎಷ್ಟು ಜನ ಸಂತೋಷವಾಗಿ ಇದ್ದಾರೆ ಎಂಬುದರ ಮೇಲೆ, ಶಿಕ್ಷಕರ ಕೆಲಸಗಳಿಂದ ವಿದ್ಯಾರ್ಥಿಗಳು ಸ್ವ-ಪ್ರೇರಣೆಯಿಂದ ಕಲಿಯುವಂತೆ ಇರಬೇಕು ಎಂದರು. ಕಾರ್ಯಕ್ರಮವನ್ನು ಯುವ ಉದ್ಯಮಿ ಶ್ರೀಕಾಂತ್ ಬಡೆಕೈಲು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ವಹಿಸಿದ್ದರು. ವೇದಿಕೆಯಲ್ಲಿ ಅನುದಾನಿತ ಖಾ.ಹಿ.ಪ್ರಾ.ಶಾಲೆ ಸುಲ್ಕೇರಿಯ ಮುಖ್ಯ ಶಿಕ್ಷಕಿ ಶಶಿಕಲಾ ಹಾಗೂ ಸರಸ್ವತಿ ಆಂಗ್ಲ ಮಾ.ಶಾಲೆ ಮುಂಡಾಜೆಯ ಮುಖ್ಯ ಶಿಕ್ಷಕಿ ಚಂದ್ರಮತಿ ಉಪಸ್ಥಿತರಿದ್ದರು. ಶಿಕ್ಷಕಿ ಸ್ವಾತಿ ಕೆ.ವಿ. ಸ್ವಾಗತಿಸಿ, ಸುಪ್ರೀತಾ ಎ. ವಂದಿಸಿದರು. ಶ್ವೇತಾ ಕುಮಾರಿ ಎಂ.ಪಿ. ನಿರೂಪಿಸಿದರು. ಕಾರ್ಯಗಾರದಲ್ಲಿ ಶ್ರೀರಾಮ ಪ್ರೌಢ ಶಾಲೆ ಪಟ್ಟೂರು, ಶ್ರೀ ವಿಷ್ಣುಮೂರ್ತಿ ಅನುದಾನಿತ ಹಿ.ಪ್ರಾ.ಶಾಲೆ ಪಟ್ಟೂರು, ಅನುದಾನಿತ ಖಾ.ಹಿ.ಪ್ರಾ.ಶಾಲೆ ಸುಲ್ಕೇರಿ, ಶೀರಾಮ ಹಿ.ಪ್ರಾ.ಶಾಲೆ ಸುಲ್ಕೇರಿ, ಶ್ರೀರಾಮ ಪ್ರೌಢ ಶಾಲೆ ಸುಲ್ಕೇರಿ, ಸರಸ್ವತಿ ಆಂಗ್ಲ ಮಾ.ಹಿ.ಶಾಲೆ ಮುಂಡಾಜೆ, ಸರಸ್ವತಿ ಆಂಗ್ಲ ಮಾ. ಪ್ರೌಢ ಶಾಲೆ ಮುಂಡಾಜೆ, ಮುಂಡಾಜೆ ಅನುದಾನಿತ ಪ್ರೌಢ ಶಾಲೆ ಮುಂಡಾಜೆ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here