ಧರ್ಮಸ್ಥಳ: “ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಮೈಗೂಡಿಸಿಕೊಂಡು ಪ್ರತಿಭಾನ್ವಿತರಾದಾಗ ಸುಂದರವಾದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ” ಎಂದು ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜು ಉಜಿರೆ ಇಲ್ಲಿಯ ಕನ್ನಡ ಉಪನ್ಯಾಸಕರಾದ ಮಹಾವೀರ ಜೈನ್ ಹೇಳಿದರು.
ಅವರು ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳದ 2023-24ನೇ ಸಾಲಿನ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಬಿ.ಸೋಮಶೇಖರ ಶೆಟ್ಟಿ ಮಾತನಾಡಿ, “ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಅವರು ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ದಿವಾಕರ ಕೊಕ್ಕಡ ಇವರು, “ಮೌಲ್ಯಯುತವಾದ ಸಂಸ್ಕಾರಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳು ರೂಢಿಸಿಕೊಳ್ಳುವ ಮೂಲಕ ಪ್ರಜ್ಞಾವಂತ ನಾಗರಿಕರಾಗುವ ಲ್ಲಿ ವಿವಿಧ ಸಂಘಗಳ ಚಟುವಟಿಕೆಗಳು ಪೂರಕವಾಗಿರಲಿ” ಎಂದರು.
ಶಾಲಾ ಮುಖ್ಯೋಪಾಧ್ಯಾಯರಾದ ಎನ್ ಪದ್ಮರಾಜು ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿ, “ವಿದ್ಯಾರ್ಥಿಗಳು ಸಂಘದ ವಿವಿಧ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು” ಎಂದರು.
ವಿವಿಧ ಸಂಘಗಳ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ಸಂಘಗಳ ವಾರ್ಷಿಕ ಯೋಜನೆಯನ್ನು ಮಂಡಿಸಿದರು.
ಇದೇ ಸಂದರ್ಭದಲ್ಲಿ 2022- 23 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 20 ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಿಕ್ಷಕ ಶಶಿಧರ ಸ್ವಾಗತಿಸಿ, ಶಿಕ್ಷಕಿ ಭವ್ಯ ಹೆಗಡೆ ವಂದಿಸಿದ ಈ ಕಾರ್ಯಕ್ರಮವನ್ನು ಶಿಕ್ಷಕ ಯುವರಾಜ ನಿರೂಪಿಸಿದರು.