- ಸುದ್ದಿ ಉದಯ ಬಳಗದಿಂದ ಪತ್ರಿಕೆ ಪೂಂಜರದ್ದಲ್ಲ, ಅವರ ಪತ್ರಿಕೆಯೆಂದು ಡಂಗುರ ಹೊಡೆಸುತ್ತೀರಲ್ಲ ಅದರಿಂದ ನಿಮಗೆ ಆಗುವ ಲಾಭ, ಅವರಿಗೆ ಆಗುವ ನಷ್ಟ ಏನೆಂದು ಹೇಳುತ್ತೀರಾ?
- ಆ ಕುರಿತು ಮತ್ತು ನಿಮ್ಮ ಹೇಳಿಕೆಗಳ ಬಗ್ಗೆ ನೇರಾನೇರ ಯುದ್ಧಕ್ಕೆ (ಚರ್ಚೆಗೆ) ಕರೆದಿದ್ದರೂ ಬಾರದೆ, ಭೀಷ್ಮನ ಎದುರು ಶಿಖಂಡಿಯನ್ನು ನಿಲ್ಲಿಸಿ ಹಿಂದಿನಿಂದ ಬಾಣ ಬಿಟ್ಟ ಅರ್ಜುನನಂತೆ – ಸುದ್ದಿ ಉದಯ ಬಳಗದ ಹಿಂದೆ ನಿಂತು ನಮ್ಮ ಕಡೆ ಆರೋಪಗಳ ಬಾಣ ಎಸೆಯುತ್ತೀರಲ್ಲಾ ಯಾಕೆ?
- ಪೂಂಜರೇ, ನೀವು ನಿಮ್ಮ ಪತ್ರಿಕೆಯನ್ನು ನಿಮ್ಮದಲ್ಲ ಎಂದು ಹೇಳಿದರೆ ನೀವು ಬೃಹನ್ನಳೆಯಾಗಿಯೇ ಉಳಿಯುತ್ತೀರಿ, ಅರ್ಜುನನಾಗುವುದೇ ಇಲ್ಲ
ನಿಮ್ಮೊಂದಿಗಿರುವವರು ನಿಮಗೆ ಶಕುನಿಗಳೇ ಆಗದಂತೆ ಜಾಗ್ರತೆ ವಹಿಸುತ್ತೀರಾ?
* ಬನ್ನಿ ಪೂಂಜರೇ, ನಾವಿಬ್ಬರೂ ನಿಮ್ಮದೇ ಚಾನೆಲ್‌ನಲ್ಲಿ ಕುಳಿತು ಮಾತಿನ ಯುದ್ಧ ಮಾಡೋಣ, ನಿಮ್ಮ ಬಳಗದ ಯಾರನ್ನು ಬೇಕಿದ್ದರೆ ಸೇರಿಸಿಕೊಳ್ಳಿ.
* ನಿಮ್ಮ ಪತ್ರಿಕೆಯಲ್ಲಿ ಶಾಸಕರಾದ ನಿಮ್ಮ ವಾರದ ಕಾರ್ಯಕ್ರಮ ಬಾರದಿದ್ದರೂ ನಮ್ಮ ಪತ್ರಿಕೆಯಲ್ಲಿ ಬರುತ್ತಿದೆ, ನಿಮ್ಮ ವಿರೋಧಿಯಾಗಿದ್ದರೆ ಮಾಡುತ್ತಿರಲಿಲ್ಲ, ಅಭಿಮಾನಿಯಾಗಿ ಪ್ರಕಟಿಸುತ್ತಿದ್ದೇವೆ.
* ಪುತ್ತೂರಲ್ಲಿ ಕಹಳೆಯ ಶ್ಯಾಮ್‌ಸುದರ್ಶನ್‌ರೊಂದಿಗೆ ಸೇರಿ, ಸುಳ್ಯದಲ್ಲಿ ಯಾರೊಂದಿಗೆ ಸೇರಿ ಸುದ್ದಿಯ ವಿರುದ್ಧ ಪತ್ರಿಕೆ ಮಾಡುವ ಪ್ರಯತ್ನದಲ್ಲಿದ್ದೀರಿ ಪೂಂಜರವರೇ?
ಪೂಂಜರೇ, ನಮ್ಮ ನಿಮ್ಮ ಯುದ್ಧದಿಂದ ಜನರಿಗೆ, ಓದುಗರಿಗೆ ಮನೋರಂಜನೆ ಮತ್ತು ಪ್ರಯೋಜನಕ್ಕಾಗಿ ಕೆಲವೊಂದು ವಿಷಯಗಳನ್ನು ಜನತೆಯ ಮುಂದಿಡೋಣ…
ನೀವು ನಿಮ್ಮ ಓಟು ಕಡಿಮೆಯಾದುದ್ದು ಯಾಕೆ ಎಂಬ ಬಗ್ಗೆ ನಿಮ್ಮ ತನಿಖಾ ವರದಿಯನ್ನು, ಆ ಬಗ್ಗೆ ನಿಮ್ಮ ಬೇಸರವನ್ನು ಜನರ ಮುಂದೆ ಇಡಿ. ಇನ್ನು ಮುಂದಕ್ಕೆ ನೀವು ಹೆಚ್ಚು ಓಟು ಪಡೆದು ಗೆಲ್ಲಲು ಏನು ಮಾಡಬೇಕು, ಮಾಡಬಾರದು ಎಂಬುದನ್ನು ನಾವು ನಿಮ್ಮ ಮತ್ತು ನಿಮ್ಮ ಅಭಿಮಾನಿಗಳ ಮುಂದಿಡುತ್ತೇವೆ.
ಒಟ್ಟಿನಲ್ಲಿ ಬೆಳ್ತಂಗಡಿ ಜನತೆಗೆ, ನಿಮಗೆ, ನಿಮ್ಮ ಸುದ್ದಿ ಉದಯದ ಬಳಗಕ್ಕೆ, ನಮ್ಮ ಬಳಗಕ್ಕೆ, ಓದುಗರಿಗೆ, ಬೆಳ್ತಂಗಡಿ ಜನತೆಗೂ ಗೆಲುವಾಗಲಿ, ಸತ್ಯಮೇವ ಜಯತೇ ಎಂದಾಗಲಿ.
ಪೂಂಜರು ಸುದ್ದಿ ಉದಯದಲ್ಲಿ ಬರೆಸಿದ – ʼಡಾ. ಶಿವಾನಂದರೇ… ಅಪಪ್ರಚಾರ ಎಷ್ಟು ಸರಿʼ, ಎಂಬ ಲೇಖನ ಎಷ್ಟೊಂದು ವೈರಲ್ ಆಗಿದೆ ಎಂದರೆ ಇಡೀ ಜಿಲ್ಲೆಗೆ ಅದು ಹರಡಿದೆ. ನಮ್ಮ ಸಿಬ್ಬಂದಿಗಳಿಗೆ ಹಲವು ಕಡೆಯಿಂದ ಬಂದಿದೆ. ಪೂಂಜರ ಮತ್ತು ಅವರ ಬಳಗದ ಈ ಕೆಲಸದ ಕಷ್ಟವನ್ನು ನೋಡಿ, ಅವರ ಪ್ರಯತ್ನಕ್ಕೆ ಸಹಾಯವಾಗಿ ಮುಂದಿನ ಚರ್ಚೆಗೆ, ವಿಮರ್ಶೆಗೆ ಅನುಕೂಲವಾಗಲಿ ಎಂದು (ಆ ಲೇಖನ ನಮಗೆ ವಿರೋಧವಾಗಿದ್ದರೂ) ಅದನ್ನು ನಮ್ಮ ಸುಳ್ಯ, ಪುತ್ತೂರು, ಬೆಳ್ತಂಗಡಿ ಪತ್ರಿಕೆಯಲ್ಲಿ ಯಥಾವತ್ತಾಗಿ ಮುದ್ರಿಸಿ ಓದುಗರಿಗೆ ನೀಡಿದ್ದೇವೆ. ಅದರಲ್ಲಿ ಸುದ್ದಿ ಉದಯದ ಸಿಬ್ಬಂದಿಗಳು ಪತ್ರಿಕೆ ಪೂಂಜರದ್ದಲ್ಲ. ತಮ್ಮದೆಂದು ಡಂಗುರ ಹೊಡೆಯುತ್ತಿದ್ದಾರೆ. ಹಾಗೆ ಹೇಳುತ್ತಿರುವುದನ್ನು ಉಪಯೋಗಿಸಿಕೊಂಡು ಪೂಂಜರು ಪತ್ರಿಕೆ ತಮ್ಮದಲ್ಲ ಎಂದು ಕೊಡವಿ ಕೈಬಿಟ್ಟರೆ ಸುದ್ದಿ ಉದಯದವರ ಪರಿಸ್ಥಿತಿ ಏನು?. ಪೂಂಜರ ಬಳಗ ಅಂತಹ ಉzಶ ಇಟ್ಟುಕೊಂಡಿದೆ ಎಂಬ ಸಂಶಯ ಅನೇಕರಲ್ಲಿದೆ. ಅಂತಹ ಪರಿಸ್ಥಿತಿ ಬಾರದಂತೆ ಸುದ್ದಿ ಉದಯ ಬಳಗದವರಿಗೆ ಅವರ ಹಿತೈಷಿಗಳು ರಕ್ಷಣೆ ನೀಡಬೇಕು ಎಂದು ಹೇಳಿದರೆ ತಪ್ಪಾಗುತ್ತದೆಯೇ?. ಸುದ್ದಿ ಉದಯ ಪತ್ರಿಕೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂಬ ಆಶಯವನ್ನು ಪ್ರಾರಂಭದಲ್ಲೇ ಹೇಳುತ್ತಾ ಬಂದಿದ್ದೇನೆ. ಅದಕ್ಕಾಗಿ ಒಂದು ಜಾಗೃತಿಯನ್ನು ಈ ಕೆಳಗೆ ನೀಡುತ್ತಿದ್ದೇನೆ. ಸುದ್ದಿ ಉದಯದ ಸಿಬ್ಬಂದಿಯೋರ್ವರು ಆರ್ಥಿಕ ಸಹಾಯ ತನ್ನಲ್ಲಿ ಕೇಳಿದ್ದಾರೆ ಎಂದು ಪೂಂಜರ ಬಳಗದ ಒಬ್ಬ ಮಹನೀಯರು ಹೇಳಿಕೊಂಡಿದ್ದಾರಂತೆ. ಆ ವ್ಯಕ್ತಿ ನಮ್ಮ ಪತ್ರಿಕೆಗೆ ಜಾಹೀರಾತು ನೀಡಿದ್ದೇನೆ ಎಂದು ಹೇಳಿ ವರದಿಯ ಮೇಲೆ ಪ್ರಭಾವ ಬೀರಲು ಈ ಹಿಂದೆ ಪ್ರಯತ್ನಿಸಿದ್ದಾರೆ. ಅದನ್ನು ನಾವು ಒಪ್ಪಿರುವುದಿಲ್ಲ ಎಂಬ ಸಿಟ್ಟು ಅವರಲ್ಲಿದೆ. ಅವರು ಆರ್ಥಿಕ ಸಹಾಯ ನೀಡಿದ್ದೇನೆ ಎಂದು ಹೇಳಿಕೊಂಡು ಸುದ್ದಿ ಉದಯದ ಮೇಲೂ ಪ್ರಭಾವ ಬೀರಬಾರದು ಎಂಬ ಕಾರಣಕ್ಕೆ ಅದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಅಂತಹುದು ನಡೆಯಲೇ ಇಲ್ಲ ಎಂದಾದರೆ ಅದನ್ನು ಪರಿಗಣಿಸದೆ ಇಲ್ಲಿಗೇ ಬಿಡಲು ವಿನಂತಿಸುತ್ತಿದ್ದೇನೆ.
ಪೂಂಜರ ಹೇಳಿಕೆಗಳ ಬಗ್ಗೆ ಅವರೊಡನೆ ಚಾನೆಲ್‌ನಲ್ಲಿ ನೇರ ಚರ್ಚೆ ಏರ್ಪಡಿಸುವಂತೆ ಈ ಹಿಂದೆ ಕೇಳಿಕೊಂಡಿದ್ದೇನೆ. ಅದರಂತೆ ಸುದ್ದಿ ಉದಯದಲ್ಲಿ ಬಂದ ಅವರ ಲೇಖನದ ವಿಷಯಗಳ ಬಗ್ಗೆ ಉತ್ತರ ದೊರಕಲಿಕ್ಕಾಗಿ ಪೂಂಜರನ್ನು, ಅವರ ಬಳಗದವರನ್ನು, ಸುದ್ದಿ ಉದಯದ ಬಳಗದವರನ್ನೂ ಕರೆದು ಸಾರ್ವಜನಿಕವಾಗಿ ಬಹಿರಂಗ ಚರ್ಚೆ ಏರ್ಪಡಿಸಬೇಕೆಂದಿದ್ದೇವೆ. ಈ ಚರ್ಚಾಗೋಷ್ಠಿಯಲ್ಲಿ ಭಾಗವಹಿಸುವವರಿಗೆ, ಕೇಳುಗರಿಗೆ ಮನೋರಂಜನೆಗಾಗಿ – ಸುದ್ದಿ ಉದಯದ ಲೇಖನದಲ್ಲಿಯ ಕೋಳಿ ಯಾರು, ಅಜ್ಜಿ ಯಾರು, ಸೂರ್ಯ ಯಾರು, ಊರು ಯಾವುದು ಎಂಬ ಕಥೆ ಹೇಳಿ ಜನತೆಗೆ ಮನೋರಂಜನೆ ನೀಡಲು ಆ ಕಥೆಯ ಹಕ್ಕುದಾರ ಕಹಳೆಯ ಶ್ಯಾಮ್‌ಸುದರ್ಶನ್‌ರವರನ್ನು ವಿಶೇಷ ಆಕರ್ಷಣೆಯಾಗಿ ಕರೆಯುತ್ತಿದ್ದೇವೆ. ಭೀಷ್ಮ, ಅರ್ಜುನ, ಶಿಖಂಡಿ, ಬೃಹನ್ನಳೆ ಮತ್ತು ಶಕುನಿಯರ ಪಾತ್ರಗಳ ಬಗ್ಗೆ ತಿಳಿಯಲು ಬನ್ನಿ ಭಾಗವಹಿಸಿ, ಸ್ಥಳಾವಕಾಶಕ್ಕಾಗಿ ಮುಂಚಿತವಾಗಿ ಕಾದಿರಿಸಿ ಎಂದು ಜನತೆಯಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಆ ಚರ್ಚಾಗೋಷ್ಠಿ ಪೂಂಜ ಮತ್ತು ಅವರ ಬಳಗದವರೊಂದಿಗೆ ನನ್ನ ಕೊನೆಯ ಚರ್ಚಾಗೋಷ್ಠಿಯಾಗಲಿ ಎಂದು ಆಶಿಸುತ್ತೇನೆ. ಬೆಳ್ತಂಗಡಿ ಜನತೆಯ, ಜಯಾನಂದ ಗೌಡರಂತಹ ಪೂಂಜರ ಅಭಿಮಾನಿಗಳ ಆಶಯವೂ ಅದೇ ರೀತಿ ಇದೆ ಎಂದು ತಿಳಿಸಲು ಸಂತೋಷ ಪಡುತ್ತೇನೆ. ಚರ್ಚೆಗೆ ಅನುಕೂಲಕ್ಕಾಗಿ ಅವರಿಗೆ ಅರ್ಥವಾಗಲು ಸುದ್ದಿ ಉದಯ ಪತ್ರಿಕೆ ಉದ್ಘಾಟನೆಗೂ ಮೊದಲು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಬಂದ ಮಾರ್ಚ್ 0̧9 1̧6 2̧̧3 30 ರ ಲೇಖನಗಳನ್ನು, ಪೂಂಜರ ಹೇಳಿಕೆಯ ನಂತರ ಬಂದ ಜುಲೈ 06, 13, 20, 27, ಆ.03ರ ಲೇಖನಗಳನ್ನು ಸುದ್ದಿ ಬೆಳ್ತಂಗಡಿ ಇ-ಪೇಪರ್‌ಗಳಲ್ಲಿ ಓದಬಹುದು. ಅವುಗಳನ್ನು ಸುದ್ದಿ ಉದಯದ ಲೇಖನದೊಂದಿಗೆ ಜನರು ಓದಿ ಅರ್ಥ ಮಾಡಿಕೊಳ್ಳಲು ವಿನಂತಿಸುತ್ತಿದ್ದೇವೆ. – ಡಾ.ಯು.ಪಿ.ಶಿವಾನಂದ