ಉಜಿರೆ: ಪದವಿಪೂರ್ವ ಶಿಕ್ಷಣದಲ್ಲಿ ಸತತ ಮೂರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯು ಮೊದಲನೆಯ ಶ್ರೇಯಾಂಕದಲ್ಲಿರುವುದು ಇಲ್ಲಿಯ ಉಪನ್ಯಾಸಕರ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆಂದು ದಕ್ಷಿಣ ಕನ್ನಡ ಜಿಲ್ಲೆಯು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ.ಜಯಣ್ಣರವರು ಅಭಿಪ್ರಾಯಪಟ್ಟರು.ಎಸ್.ಡಿ.ಎಂ.ಪಿಯು ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಸಂಘದ ವತಿಯಿಂದ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ವೇಳೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಎಸ್.ಡಿ.ಎಂ.ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ಇವರು ಜೀವಶಾಸ್ತ್ರದ ಮಹತ್ವದ ಬಗ್ಗೆ ವಿವರಿಸಿದರು.ಮುಂದುವರೆದು ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಜ್ಞಾನವನ್ನು ತುಂಬುವವರಾಗದೆ, ಜ್ಞಾನದಿಂದ ವಿಜ್ಞಾನದೆಡೆಗೆ, ವಿಜ್ಞಾನದಿಂದ ತಂತ್ರಜ್ಞಾನದೆಡೆಗೆ ಹಾಗೂ ತಂತ್ರಾಂಶ ಜ್ಞಾನದೆಡೆಗೆ ಮುನ್ನಡೆಯುವಂತೆ ಪ್ರೇರೇಪಿಸುವವರಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಳೆದ ಮಾರ್ಚ್ನ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಜೀವಶಾಸ್ತ್ರದಲ್ಲಿ 100/100 ಮತ್ತು 99/100 ಪಡೆದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಪ್ರತಿಭಾನ್ವಿತರಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಅಳಿಕೆಯ ಸತ್ಯಸಾಯಿ ಲೋಕಸೇವಾ ಪ.ಪೂ.ಕಾಲೇಜಿನ ಉಪನ್ಯಾಸಕ ಶಿವಪ್ರಕಾಶ್ರವರನ್ನು ಲಂಡನ್ನಿನ ಪ್ರತಿಷ್ಠಿತ ಲಿನ್ನೆಯನ್ ಸೊಸೈಟಿಯ ಫೆಲೋ ಆಗಿ ಅರ್ಹತೆ ಪಡೆದ ಸಲುವಾಗಿ ಸನ್ಮಾನಿಸಲಾಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ.ಸಂಪತ್ ಕುಮಾರ್ ಕೆ.ಕೆ. ಅವರು ಸಿಇಟಿ ಹಾಗೂ ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವ ಕುರಿತು ಮತ್ತು ಡಾ.ನವೀನ್ ಜಿ.ಪಿ.ಎ.ಎನ್ ಅವರು ಪಠ್ಯದಲ್ಲಿನ ಕ್ಲಿಷ್ಠಕರವಾದ ವಿಷಯಗಳನ್ನು ಅರ್ಥೈಸಿಕೊಳ್ಳುವ ಬಗ್ಗೆ ಮಾಹಿತಿ ಹಂಚಿಕೊಂಡರು.
ಎಸ್.ಡಿ.ಎಂ.ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ., ದ.ಕ. ಜಿಲ್ಲೆಯ ಪ್ರಾಚಾರ್ಯರ ಸಂಘದ ಅಧ್ಯಕ್ಷ ಗಂಗಾಧರ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಸಂಘದ ಸ್ಥಾಪಕಾಧ್ಯಕ್ಷ ಸುಕುಮಾರ ಜೈನ್, ಅಧ್ಯಕ್ಷ ಸುನಿಲ್ ಪಿ.ಜೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಸುನಿಲ್ ಪಿ.ಜೆ. ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕ ದೀಕ್ಷಿತ್ ರೈ ನಿರೂಪಿಸಿ, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಶೆಟ್ಟಿ ವಂದಿಸಿದರು.