

ಉಜಿರೆ: ತಮ್ಮ ಸಮರ್ಪಣಾ ಭಾವದ ಮೂಲಕ ವೃತ್ತಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಪ್ರೊ.ಶಾಂತಿಪ್ರಕಾಶ್ ಅವರು ಸಹೃದಯತೆ ಮೂಲಕ ಸಹೋದ್ಯೋಗಿಗಳ ಪ್ರೀತಿ ಗಳಿಸಿದ್ದಾರೆ. ಶಿಸ್ತು, ಪರಿಪೂರ್ಣತೆ ಮತ್ತು ಸಮರ್ಪಣೆ ಅವರ ಸ್ವಭಾವ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಜು.31ರಂದು ಸೇವಾನಿವೃತ್ತಿ ಹೊಂದಿದ ಉಪ ಪ್ರಾಂಶುಪಾಲ, ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಶಾಂತಿಪ್ರಕಾಶ್ ಅವರಿಗೆ ಕಾಲೇಜಿನ ಬೋಧಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಮ್ಮಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ.ಕುಮಾರ ಹೆಗ್ಡೆ, “ಪ್ರೊ.ಶಾಂತಿಪ್ರಕಾಶ್ ಸದಾ ಚಟುವಟಿಕೆಯಿಂದ ಕೂಡಿದ್ದು, ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸದಾ ಪರಿಸರದೊಂದಿಗೆ ನಿಕಟವಾಗಿರುವ ಅವರ ಕೃಷಿ ಪ್ರವೃತ್ತಿ ಮುಂದುವರಿಯಲಿ. ನಿವೃತ್ತಿ ಜೀವನ ಸುಖಕರವಾಗಿರಲಿ” ಎಂದು ಆಶಿಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಶಾಂತಿಪ್ರಕಾಶ್ ಅವರು ತಮ್ಮ ವೃತ್ತಿ ಜೀವನದ ಯಶಸ್ಸಿಗೆ ಸಹಕಾರ ನೀಡಿದ ಸಹೋದ್ಯೋಗಿ ವರ್ಗ, ಬೋಧಕೇತರ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಕಾಲೇಜಿನ ಅಭಿವೃದ್ಧಿಗೆ ತಮ್ಮ ಸಹಕಾರ ಇರುವುದು ಎಂದು ಅವರು ತಿಳಿಸಿದರು. ಕಾಲೇಜಿನ ಸ್ವಚ್ಛತಾ ಸಿಬ್ಬಂದಿಗೆ ಉಡುಗೊರೆ ನೀಡಿದರು.
ಕಾಲೇಜಿನ ಕುಲಸಚಿವ (ಆಡಳಿತ) ಪ್ರೊ.ಶಶಿಶೇಖರ ಎನ್.ಕಾಕತ್ಕರ್ ಅವರು, ಪ್ರೊ. ಶಾಂತಿಪ್ರಕಾಶ್ ಅವರೊಂದಿಗಿನ ತಮ್ಮ 36 ವರ್ಷಗಳ ಒಡನಾಟವನ್ನು ಸ್ಮರಿಸಿಕೊಂಡರು.
“ಸರಳ ಜೀವನ ಹಾಗೂ ಉನ್ನತ ಆಲೋಚನೆ ಶಾಂತಿಪ್ರಕಾಶ್ ಅವರ ವೈಶಿಷ್ಟ್ಯ.ಆ ಮೂಲಕ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ” ಎಂದ ಅವರು, ಶಾಂತಿಪ್ರಕಾಶ್ ಕುರಿತು ಸ್ವರಚಿತ ಸಂಸ್ಕೃತ ಪದ್ಯವೊಂದನ್ನು ವಾಚಿಸಿದರು.
ಸಂಖ್ಯಾಶಾಸ್ತ್ರ ಪ್ರಾಧ್ಯಾಪಕಿ ಡಾ. ಸವಿತಾ ಕುಮಾರಿ ಅವರು, ಪ್ರೊ. ಶಾಂತಿಪ್ರಕಾಶ್ ಓರ್ವ ಸರಳ, ಸಹೃದಯಿ, ಜವಾಬ್ದಾರಿಯುತ, ಹಾಸ್ಯ ಪ್ರವೃತ್ತಿಯುಳ್ಳ, ಸ್ಫೂರ್ತಿದಾಯಕ ವ್ಯಕ್ತಿ ಎಂದು ವರ್ಣಿಸಿದರು.
ಪರೀಕ್ಷಾಂಗ ಕುಲಸಚಿವೆ ಪ್ರೊ. ನಂದಾ ಕುಮಾರಿ, ಕಲಾ ನಿಕಾಯದ ಡೀನ್ ಡಾ. ಶಲೀಪ್ ಎ.ಪಿ. ಹಾಗೂ ಪರೀಕ್ಷಾಂಗ ಕುಲಸಚಿವ (ನಿವೃತ್ತ) ಪ್ರೊ. ಅಜಯ್ ಕೊಂಬ್ರಬೈಲ್ ಅವರು ಸಮ್ಮಾನಿತರ ಕುರಿತು ಮಾತನಾಡಿದರು.

ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಡಾ. ಎ. ಜಯ ಕುಮಾರ್ ಶೆಟ್ಟಿ, ನಿವೃತ್ತ ಕುಲಸಚಿವ ಡಾ. ಬಿ.ಪಿ. ಸಂಪತ್ ಕುಮಾರ್, ನಿವೃತ್ತ ಕಚೇರಿ ಅಧೀಕ್ಷಕ ರಾಜೇಂದ್ರ ಇಂದ್ರ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನಲ್ಲಿ 13 ವರ್ಷ ಸೇವೆ ಸಲ್ಲಿಸಿ ಮಂಗಳೂರಿನ ಎಸ್.ಡಿ.ಎಂ. ಬಿಬಿಎಂ ಕಾಲೇಜಿಗೆ ವರ್ಗಾವಣೆಗೊಂಡಿರುವ ಬಿಬಿಎಂ ಸಹಾಯಕ ಪ್ರಾಧ್ಯಾಪಕ ಗುರುದತ್ ಮತ್ತು ಬೋಧಕರ ಸಂಘಕ್ಕೆ ಪದವಿಪೂರ್ವ ಕಾಲೇಜಿನಿಂದ ಪ್ರತಿನಿಧಿಯಾಗಿ ಆಯ್ಕೆಯಾದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಬೇಬಿ ಅವರನ್ನು ಅಭಿನಂದಿಸಲಾಯಿತು.
ಬೋಧಕರ ಸಂಘದ ಕಾರ್ಯದರ್ಶಿ, ಗಣಿತ ವಿಭಾಗ ಮುಖ್ಯಸ್ಥ ಪ್ರೊ.ಗಣೇಶ್ ನಾಯಕ್ ಸ್ವಾಗತಿಸಿ, ಪ್ರಸ್ತಾವಿಸಿದರು. ಜಂಟಿ ಕಾರ್ಯದರ್ಶಿಗಳಾದ ಭಾನುಪ್ರಕಾಶ್ ಬಿ.ಇ. ಅತಿಥಿ ಪರಿಚಯ ನೀಡಿ, ಸಮ್ಮಾನಿತರ ಕುರಿತು ಸ್ವರಚಿತ ಕವನ ವಾಚಿಸಿದರು.ವಿನುತಾ ವಂದಿಸಿದರು.ಡಾ.ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

ನೇಮಕ: ಇದೇ ಸಂದರ್ಭದಲ್ಲಿ, ತೆರವಾದ ಉಪ ಪ್ರಾಂಶುಪಾಲ ಸ್ಥಾನಕ್ಕೆ ಕುಲಸಚಿವ (ಆಡಳಿತ) ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಶಶಿಶೇಖರ ಎನ್. ಕಾಕತ್ಕರ್, ಕುಲಸಚಿವ (ಆಡಳಿತ) ಸ್ಥಾನಕ್ಕೆ ಕಲಾ ನಿಕಾಯದ ಡೀನ್ ಹಾಗೂ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಶಲೀಪ್ ಎ.ಪಿ., ಹಾಗೂ ಕಲಾ ನಿಕಾಯದ ಡೀನ್ ಸ್ಥಾನಕ್ಕೆ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಭಟ್ ಅವರನ್ನು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ನಿಯುಕ್ತಿಗೊಳಿಸಿದರು.ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.