ಸುಲ್ಕೇರಿ: ಸುಲ್ಕೇರಿ ಗ್ರಾಮದ ಕೇಡೇಲುವಿನಲ್ಲಿರುವ ಕೊರಗಜ್ಜ ಹಾಗೂ ಕಮಲಜ್ಜಿ ದಂಪತಿಯ ಶೋಚನೀಯ ಪರಿಸ್ಥಿತಿಯ ಬಗೆಗಿನ ಸುದ್ದಿ ವರದಿಗೆ ವ್ಯಾಪಕ ಸ್ಪಂಧನೆ ದೊರಕಿದೆ. ಸುದ್ದಿಯ ವರದಿ ನೋಡಿ ಕೂಡಲೇ ಸ್ಪಂಧಿಸಿದ ಉಜಿರೆಯ ಗುತ್ತಿಗೆದಾರ ದೇವಿಪ್ರಸಾದ್ ರವರು, ಆ ಮನೆಯ ಪರಿಸ್ಥಿತಿಯನ್ನು ತಿಳಿದುಕೊಂಡರು. ತಾನೇನು ಮಾಡಬಹುದು ಎಂದು ನಮ್ಮಲ್ಲಿ ಕೇಳಿದಾಗ ಅವರನ್ನು ಸ್ಥಳಕ್ಕೆ ಕಳುಹಿಸಿ ಅಲ್ಲಿನ ವಾಸ್ತವ ಸ್ಥಿತಿಗತಿ ವಿವರಿಸಲಾಯಿತು.
ಕೇಡೇಲು ಕೊರಗಜ್ಜನ ಮನೆ ದುರಸ್ತಿ ಕಾರ್ಯಕ್ಕೆ ಮುಂದಾದ ದೇವಿಪ್ರಸಾದ್- ಉಜಿರೆಯ ನಂದಗೋಕುಲ ಕನ್ಸಸ್ಟ್ರಕ್ಷನ್ ನಿಂದ ಮನೆ ದುರಸ್ತಿ
ಸುದ್ದಿ ವರದಿಯನ್ನು ನೋಡಿ ಈ ದಂಪತಿಗಳ ಪರಿಸ್ಥಿತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಏನಾದ್ರೂ ಕೆಲಸ ಮಾಡಲೇಬೇಕೆಂದು ಚಿಂತಿಸಿದ ದೇವಿಪ್ರಸಾದ್, ತನ್ನ ಉಜಿರೆಯ ನಂದಗೋಕುಲ ಕನ್ಸ್ ಸ್ಟ್ರಕ್ಷನ್ ಕಡೆಯಿಂದ ಮನೆಯ ದುರಸ್ತಿ ಕಾರ್ಯ ಕೈಗೊಂಡರು. ಮನೆಯ ಛಾವಣಿಯ ನಿರ್ಮಾಣಕ್ಕೆ ಮುಂದಾದ ದೇವಿಪ್ರಸಾದ್, ಆ ವೃದ್ಧರನ್ನು ಆಸ್ಪತ್ರೆಗೆ ದಾಖಲಿಸಿರುವ ಸುದ್ದಿ ತಿಳಿದು ಕೂಡಲೇ ಕೆಲಸ ಕೈಗೆತ್ತಿಕೊಂಡರು. ಅಜ್ಜ ಅಜ್ಜಿ ಮತ್ತೆ ಆಸ್ಪತ್ರೆಯಿಂದ ಮನೆಗೆ ಬರುವ ಮೊದಲು ಕೆಲಸ ಮುಗಿಯಬೇಕೆಂದು ಮನೆಯ ಛಾವಣಿಯ ಕೆಲಸ ಪೂರ್ಣಗೊಳಿಸಿದ್ದಾರೆ.
ಮನೆಯ ಮುಂಭಾಗಕ್ಕೂ ಸೀಟ್ ಅಳವಡಿಕೆ ನಿರ್ಧಾರ:
ಕಬ್ಬಿಣದ ಮಾಡು ನಿರ್ಮಾಣ ಮಾಡಿ, ಪ್ರತಿಷ್ಠಿತ ಕಂಪೆನಿಯ ಸೀಟ್ ಅಳವಡಿಕೆ ಮಾಡಲಾಗಿದೆ, ಇದರ ಜೊತೆಗೆ ಮನೆಯ ಮುಂಭಾಗದ (ಜಪ್ಪು) ಕೆಲ ಭಾಗಗಳಿಗೂ ಸೀಟ್ ಅಳವಡಿಕೆ ಮಾಡಲು ನಿರ್ಧರಿಸಿದ್ದಾರೆ. ಇದರ ಕೆಲಸ ಕಾರ್ಯ ಕೂಡ ಪ್ರಗತಿಯಲ್ಲಿದೆ. ಇದರ ಜೊತೆ ಅಜ್ಜ ಅಜ್ಜಿ ಮಲಗಲು ಸುಸಜ್ಜಿತ, ಆಸ್ಪತ್ರೆಯಲ್ಲಿರುವಂತಹ ಮಂಚಗಳನ್ನು ನೀಡುವ ಬಗ್ಗೆಯೂ ಯೋಜನೆ ರೂಪಿಸಿಕೊಂಡಿದ್ದಾರೆ.ಆದರೆ ತನ್ನ ಕೆಲಸ ಕಾರ್ಯದ ಬಗ್ಗೆ ಯಾವುದೇ ಪ್ರಚಾರ ಬೇಡ ಅಂತ ದೇವಿಪ್ರಸಾದ್ ತಿಳಿಸಿದ್ದರೂ, ನಮ್ಮ ವರದಿಗೆ ಅವರು ಕೊಟ್ಟ ಸ್ಪಂದನೆಗೆ ನಾವು ಗೌರವ ಸಲ್ಲಿಸಿ,ಅವರ ಕಾರ್ಯವನ್ನು ಗುರುತಿಸುವುದಕ್ಕಾಗಿ ಈ ವರದಿ ಮಾಡುತ್ತಿದ್ದೇವೆ.