ನದಿ ನೀರಿನ ಹರಿವಿಗೆ ಕಿಂಡಿ ಅಣೆಕಟ್ಟುಗಳಲ್ಲಿ ತಡೆಯಾದ ತ್ಯಾಜ್ಯ, ಮರಮಟ್ಟುಗಳು

0

ಬೆಳ್ತಂಗಡಿ: ಕಳೆದ ವಾರ ಸುರಿದ ಭಾರೀ  ಮಳೆಗೆ  ನದಿ, ಹೊಳೆಗಳಲ್ಲಿ ಹರಿದು ಬಂದ ಪ್ರವಾಹದ ಜತೆಗೆ  ಮೇಲ್ಭಾಗದ ತ್ಯಾಜ್ಯ,ಕಸಕಡ್ಡಿಗಳು, ಮರಮಟ್ಟುಗಳು ಕೊಚ್ಚಿಕೊಂಡು ಬಂದಿವೆ.ಪ್ರವಾಹದಲ್ಲಿ ಹರಿದುಬಂದ  ಮರಮಟ್ಟು, ತ್ಯಾಜ್ಯ ಗಳು ಕಿಂಡಿ ಅಣೆಕಟ್ಟುಗಳಲ್ಲಿ ಜಮೆಯಾಗಿ ನೀರಿನ ಸುಗಮ ಹರಿವಿಗೆ ತಡೆಯೊಡ್ಡಿವೆ.

ಬೆಳ್ತಂಗಡಿ ತಾಲೂಕಿನ ಮೃತ್ಯುಂಜಯ, ನೇತ್ರಾವತಿ, ಲಾಯಿಲ ಬಳಿಯ ಸೋಮಾವತಿ ನದಿಗಳಿಗೆ ಅರಣಪಾದೆ, ಕಾಪು, ಕಡಂಬಳ್ಳಿ, ಆನಂಗಳ್ಳಿ, ಪಜಿರಡ್ಕ, ನಿಡಿಗಲ್, ಕೊಪ್ಪದ ಗಂಡಿ ಸೇರಿದಂತೆ ಅನೇಕ ಕಡೆಗಳಲ್ಲಿ  ಕಿಂಡಿ ಅಣೆಕಟ್ಟುಗಳಿವೆ.ಇವುಗಳಲ್ಲಿ ಕೆಲವು ಕಿಂಡಿ ಅಣೆಕಟ್ಟುಗಳು ಸಾರ್ವಜನಿಕರ ಸಂಪರ್ಕ ಸೇತುವೆಯಾಗಿ ಬಳಸಲ್ಪಡುತ್ತಿವೆ.ಎಲ್ಲಾ ಕಿಂಡಿ ಅಣೆಕಟ್ಟುಗಳಲ್ಲಿ ಮೊದಲ ಮಳೆಗೆ ಪ್ರವಾಹದ ಜತೆಗೆ ಕಸ ಕಡ್ಡಿ, ತ್ಯಾಜ್ಯ, ಮರಮಟ್ಟುಗಳು ಕಿಂಡಿ ಅಣೆಕಟ್ಟುಗಳಲ್ಲಿ ದಾಸ್ತಾನಾಗುವುದರಿಂದ ನೀರಿನ ಹರಿವಿಗೆ ಹಾಗೂ ಜನ ಸಂಚಾರಕ್ಕೆ  ಆತಂಕಕಾರಿಯಾಗಿವೆ.ಈ ಬಾರಿ ಜೂನ್ ಕೊನೆ ತನಕವೂ  ಮಳೆ ಬಾರದೆ ನದಿಗಳು ತುಂಬಿ ಹರಿಯಲಿಲ್ಲ.ಆದರೆ ಜುಲೈ ಆರಂಭಕ್ಕೆ 4 ದಿನ ಉತ್ತಮ ಮಳೆ ಸುರಿದು ನದಿಗಳ ನೀರಿನ  ಪ್ರವಾಹ  ಅಧಿಕವಾಗಿತ್ತು. ಮತ್ತೆ  ಈಗ ಪ್ರವಾಹ ಇಳಿಮುಖಗೊಂಡು  ನದಿಗಳ ನೀರಿನ ಪ್ರಮಾಣ ಸಹಜಸ್ಥಿತಿಗೆ ಬಂದಿದ್ದು, ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟು ಸಂಗ್ರಹಗೊಂಡಿರುವುದು ಬೆಳಕಿಗೆ ಬಂದಿದೆ.

ಅಪಾಯಕಾರಿ: ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟು,ತ್ಯಾಜ್ಯ ಸಿಲುಕಿಕೊಂಡಿರುವುದು ಅವುಗಳ ಭವಿಷ್ಯಕ್ಕೂ ಮಾರಕ. ಅಲ್ಲದೆ ಪ್ರವಾಹ ಸಮೀಪದ  ಗದ್ದೆ, ತೋಟಗಳಿಗೂ ನುಗ್ಗಿ ಮರಮಟ್ಟು, ತ್ಯಾಜ್ಯ ಕಿಂಡಿ ಅಣೆಕಟ್ಟುಗಳಲ್ಲಿ ಸಿಲುಕುವುದರಿಂದ ನದಿ ನೀರಿನ ಸರಾಗ ಹರಿವಿಗೆ ತಡೆಯುಂಟಾಗುತ್ತದೆ.ಮುಂದಿನ ದಿನಗಳಲ್ಲಿ ಪ್ರವಾಹದಲ್ಲಿ  ನದಿಗಳು ತುಂಬಿ ಹರಿದಾಗ ಮತ್ತಷ್ಟು ಮರಮಟ್ಟುಗಳು ನದಿ ನೀರಿನೊಂದಿಗೆ ತೇಲಿ ಬಂದು ಕಿಂಡಿ ಅಣೆಕಟ್ಟುಗಳಲ್ಲಿ ಜಮೆಯಾಗಿ ಅದಕ್ಕೆ ಅಪಾಯಕಾರಿಯಾಗುವ ಸಂಭವವಿದೆ.ಇದರಿಂದ ಸರಾಗ ನೀರಿನ ಹರಿವಿಗೆ ಅಡ್ಡಿಯಾಗಿ ಕೃತಕ ನೆರೆ ಸೃಷ್ಟಿಯಾಗಿ ತೋಟಗಳಿಗೆ ಪ್ರವಾಹ ನುಗ್ಗುವುದಲ್ಲದೆ ಮರಮಟ್ಟು, ತ್ಯಾಜ್ಯ ತೋಟಗಳಿಗೆ ಬಂದು ಬೀಳುತ್ತದೆ. ಅದನ್ನು ತೋಟಗಳಿಂದ ತೆರವುಗೊಳಿಸುವುದು ಸವಾಲಾಗಿ ಪರಿಣಮಿಸುತ್ತದೆ. ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟು ತುಂಬುವುದರಿಂದ ನೀರು ಸರಾಗವಾಗಿ ಹರಿಯದೆ ಹೂಳು ತುಂಬಿಕೊಳ್ಳಲು ಕಾರಣವಾಗುತ್ತಿದೆ.

ನದಿ ಪ್ರದೇಶ ಸ್ವಚ್ಛತೆ: ಮಳೆಗಾಲ ಆರಂಭಕ್ಕೆ ಮೊದಲು ಪಂಚಾಯತಿಗಳಿಗೆ ನದಿ ಪ್ರದೇಶಗಳಲ್ಲಿರುವ ಮರಮಟ್ಟು ಗುರುತಿಸಿ ಅವುಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿತ್ತು ಆದರೆ ಇದು ಸಮರ್ಪಕವಾಗಿ  ನಡೆಯದೆ ಈಗ ಸಮಸ್ಯೆ ಎದುರಾಗಿದೆ ಎಂದು ಕಿಂಡಿ ಅಣೆಕಟ್ಟುಗಳ ಫಲಾನುಭವಿಗಳು ಹೇಳುತ್ತಿದ್ದಾರೆ.
ಕೇವಲ ಕಿಂಡಿ ಅಣೆಕಟ್ಟುಗಳಿಗೆ ಸಿಲುಕಿದ್ದ ಮರಮಟ್ಟುಗಳನ್ನು ಮಾತ್ರ ತೆಗೆಯಲಾಗಿದೆ.ಆದರೆ ನದಿ ಹರಿಯುವ ಪ್ರದೇಶದಲ್ಲಿ ಬೀಳುವ ಗೆಲ್ಲು, ಮರಮಟ್ಟುಗಳನ್ನು  ತೆರವುಗೊಳಿಸಲಿಲ್ಲ.ಇದರಿಂದ ನದಿ ನೀರಿನಲ್ಲಿ ತೇಲಿ ಬರುವ ಮರಮಟ್ಟುಗಳು ಕಿಂಡಿ ಅಣೆಕಟ್ಟುಗಳಿಗೆ ಸಿಲುಕಿಕೊಳ್ಳುತ್ತಿವೆ.ಕೆಲವೆಡೆ ಕಿಂಡಿ ಅಣೆಕಟ್ಟಿನ ಸುತ್ತ ಪರಿಸರದಲ್ಲಿ ತೆರವುಗೊಳಿಸಿದ ಮರಮಟ್ಟುಗಳನ್ನು ಅಲ್ಲೇ ರಾಶಿ ಹಾಕಲಾಗಿದ್ದು ಅವು ಮತ್ತೆ ನದಿಯಲ್ಲಿ ಹರಿದುಬರುವ ಸಾಧ್ಯತೆ ಇದೆ.ಅದು ಇನ್ನಷ್ಟು ಅಪಾಯಕ್ಕೆ ಕಾರಣವಾಗಲಿದೆ.

ವಿಪತ್ತು ನಿರ್ವಹಣೆ ತಂಡದ ಸಹಕಾರ: ಕಿಂಡಿ ಅಣೆಕಟ್ಟು ಹಾಗೂ  ನದಿಗಳ ಸ್ವಚ್ಛತೆಗೆ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣೆ ತಂಡ ಕೈಜೋಡಿಸಿದೆ.ಈ ತಂಡದ ಸದಸ್ಯರು ಸ್ವಚ್ಛತೆ ನಡೆಸಿದ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ತೆರವುಗೊಳಿಸಲಾಗಿದೆ.ಅವರು ಕಿಂಡಿ ಅಣೆಕಟ್ಟುಗಳಲ್ಲದೆ ನದಿ ಪ್ರದೇಶಗಳಲ್ಲೂ ಬಿದ್ದಿದ್ದ ಮರಮಟ್ಟು ಇತ್ಯಾದಿಗಳನ್ನು  ತೆರವುಗೊಳಿಸಿದ್ದಾರೆ.ಇಂತಹ ಕಡೆಗಳಲ್ಲಿರುವ ಕಿಂಡಿ ಅಣೆಕಟ್ಟುಗಳಲ್ಲಿ ಪ್ರಸ್ತುತ ತ್ಯಾಜ್ಯ, ಮರಮಟ್ಟು ಕಂಡು ಬಂದಿಲ್ಲ.

p>

LEAVE A REPLY

Please enter your comment!
Please enter your name here