ಉಜಿರೆ: ಸೇವಾಭಾರತಿ ಕನ್ಯಾಡಿ ಹಾಗೂ ಕನ್ಯಾಡಿಯ ಶ್ರೀ ದುರ್ಗಾ ಮಾತೃ ಮಂಡಳಿಗಳ ಜಂಟಿ ಸಹಯೋಗದಲ್ಲಿ ನಡೆದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭವು ಕನ್ಯಾಡಿಯ ಸೇವಾನಿಕೇತನ ಕಾರ್ಯಾಲಯದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಯೋಗ ತರಬೇತುದಾರರಾದ ಕು. ಭಾಷಿಣಿ ಯೋಗಾಭ್ಯಾಸದ ಉದ್ದೇಶ ಹಾಗೂ ಅಗತ್ಯತೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿ, ತಾನು ನಡೆಸಿದ ಯೋಗ ಶಿಬಿರಗಳಲ್ಲಿ ಇದು ಅತ್ಯುತ್ತಮ ಅನುಭವ ನೀಡಿದ ಶಿಬಿರವಾಗಿದ್ದು ಇದಕ್ಕೆ ಅವಕಾಶ ಕೊಟ್ಟ ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ ಅವರಿಗೆ ಕೃತಜ್ಞತೆಯನ್ನು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಶ್ರೀ ದುರ್ಗಾ ಮಾತೃ ಮಂಡಳಿಯ ಅಧ್ಯಕ್ಷೆ ಶಾಂತ ಪಿ ಶೆಟ್ಟಿ ಯೋಗ ಅಭ್ಯಾಸದ ಮಹತ್ವವನ್ನು ತಿಳಿಸಿದರು. ಸೇವಾಭಾರತಿಯ ಅಧ್ಯಕ್ಷೆ ಸ್ವರ್ಣಗೌರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಶ್ರೀದುರ್ಗಾ ಮಾತೃ ಮಂಡಳಿಯ ಸದಸ್ಯೆ ರವಿಜಾ ಸತೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಯೋಗ ತರಬೇತುದಾರರಾದ ಭಾಷಿಣಿಯವರನ್ನು ಸೇವಾಭಾರತಿ ಹಾಗೂ ಶ್ರೀ ದುರ್ಗಾ ಮಾತೃ ಮಂಡಳಿ ಪರವಾಗಿ ಗೌರವಿಸಲಾಯಿತು.
ಒಟ್ಟು 15 ಮಂದಿ ಶಿಬಿರಾರ್ಥಿಗಳು ಯೋಗ ಶಿಬಿರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸೇವಾಭಾರತಿಯ ಡಾಕ್ಯುಮೆಂಟೇಷನ್ ಸಂಯೋಜಕಿ ಕು.ಅಪೂರ್ವ ಪಿ.ವಿ. ನಿರೂಪಿಸಿ, ಅಕೌಂಟೆಂಟ್ ಕು.ಅಕ್ಷತ ಸ್ವಾಗತಿಸಿ, ಧನ್ಯವಾದವಿತ್ತರು.