ಸಂತೋಷದಿಂದ ಬದುಕುವುದೇ ಸ್ವರ್ಗ: ವಸಂತ ಬಂಗೇರ- ಉಪನ್ಯಾಸಕ ಪುನೀತ್ ಕುಮಾರ್ ಬಯಲು ಅವರಿಗೆ ನುಡಿನಮನ ಕಾರ್ಯಕ್ರಮ

0

ಬೆಳ್ತಂಗಡಿ: ಇರುವ ಭಾಗ್ಯಗಳಿಗೆ ತೃಪ್ತಿಪಟ್ಟು ಸಂತೋಷದಿಂದ ಬದುಕುವುದೇ ಸ್ವರ್ಗ.ಆಶೆ ಆಕಾಂಕ್ಷೆಗಳಿಗೆ ಒಳಗಾಗಿ ಅತೃಪ್ತಿಯಿಂದ ಬಾಳುವುದು ನರಕಕ್ಕೆ ಸಮಾನ. ಪುನೀತ್ ಕುಮಾರ್ ಅವರು ಬಾಳಿದ್ದು ಅಲ್ಪ ಕಾಲವಾದರೂ ತೃಪ್ತಿ ಮತ್ತು ಸಂತೋಷದಿಂದ ಬಾಳುತ್ತಾ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು‌. ಇಂದು ಅವರ 6 ವರ್ಷದ ಮಗನಿಗೆ ಉತ್ತಮ ಶಿಕ್ಷಣ‌ ನೀಡಿ ಅವನನ್ನು ಆದರ್ಶನನ್ನಾಗಿಸುವ ಜವಾಬ್ಧಾರಿ ಅವರ ಧರ್ಮಪತ್ನಿ ದಿವ್ಯಾ ಅವರಿಗಿದೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದಲ್ಲಿ ಇತ್ತೀಚೆಗೆ ನಡೆದ ಆಕಸ್ಮಿಕ ಘಟನೆಯೊಂದರಲ್ಲಿ ಅಕಾಲಿಕವಾಗಿ ಅಗಲಿದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ,‌ ನೆರಿಯ‌ ಗ್ರಾಮದ ಬಯಲು ಬೋವಿನಡಿ‌ ನಿವಾಸಿ ಪುನೀತ್ ಕುಮಾರ್ ಬಿ ಅವರಿಗೆ ಸಾರ್ವಜನಿಕ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.‌

ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಮಾತನಾಡಿ, ಉಪನ್ಯಾಸಕ ವೃತ್ತಿಯನ್ನು ಸಂಬಳಕ್ಕಾಗಿ ಇರುವ ಕೆಲಸ ಎಂದು ಬಗೆಯದೆ ಪುನೀತ್ ಅವರು, ತಪಸ್ಸು ಎಂಬ ರೀತಿಯಲ್ಲಿ ನಡೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಲು ಪದಗಳಿಲ್ಲ. ಪರಿಸ್ಥಿತಿಯನ್ನು ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕಷ್ಟೆ ಎಂದರು.
ನಿವೃತ್ತ ಪ್ರಾಚಾರ್ಯ ಪ್ರೊ.ಕೃಷ್ಣಪ್ಪ ಪೂಜಾರಿ ಮಾತನಾಡಿ, ಮರಣ ಎಲ್ಲರ‌ ಬಾಳಲ್ಲೂ ಬರುವಂತಹದ್ದು. ಮರಣದ ಬಳಿಕವೂ ಸ್ಮರಣೆಗಾಗಿರುವ ರೀತಿಯಲ್ಲಿ ಬಾಳುವುದೇ ಒಂದು ಸವಾಲು. ಆ ಕಾರ್ಯದಲ್ಲಿ ಪುನೀತ್ ಅಮರರಾಗಿದ್ದಾರೆ ಎಂದರು. ಸಂಸ್ಕಾರಯುತ ಜೀವನ ಅನುಸರಿಸುತ್ತಿರುವ ರಾಮ್‌ಕುಮಾರ್ ಅವರ ಕುಟುಂಬ ಸಮಾಜಕ್ಕೆ ಆದರ್ಶ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಡಿ ಯದುಪತಿ ಗೌಡ, ಪುನೀತ್ ಕುಟುಂಬಸ್ಥರ ಪರವಾಗಿ ರಾಮನಾಥ ಅವರು ನುಡಿನಮನ ಅರ್ಪಿಸಿದರು.

ಆರಂಭದಲ್ಲಿ ಪುನೀತ್‌ ಭಾವಚಿತ್ರಕ್ಕೆ ಅವರ ಮಾತಾಪಿತೃಗಳಾದ ರಾಮ್‌ಕುಮಾರ್ ಮತ್ತು ಸುಶೀಲಾ ಅವರು ದೀಪ ಬೆಳಗಿದರು.
ಪತ್ನಿ ದಿವ್ಯಾ, ಪುತ್ರ ಪ್ರಿಯಾಂಶ್, ಸಹೋದರ ಪ್ರವೀಣ್, ಸಹೋದರಿ ಪ್ರತಿಮಾ, ಮಾವ ಪೂವಪ್ಪ ಸಾಲ್ಯಾನ್, ಅತ್ತೆ ಕೇಶವತಿ ಹಾಗೂ ಬಂಧುವರ್ಗದವರು, ನಿಟ್ಟೆ ಮತ್ತು ಉಜಿರೆ ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ಪುನೀತ್ ಅಭಿಮಾನಿಗಳು ಭಾಗಿಯಾಗಿದ್ದರು.
ವಸಂತ ಪೂಜಾರಿ ಪುದುವೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

ಧಾರ್ಮಿಕ ವಿಧಿಯನ್ವಯ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪುನೀತ್ ಕುಮಾರ್ ಅವರ ವೈಕುಂಠ ಸಮಾರಾಧನೆ ಹಾಗೂ ಇತರ ವಿಧಿ‌ವಿಧಾನಗಳು ನಡೆದವು.

LEAVE A REPLY

Please enter your comment!
Please enter your name here