ಎಸ್.ಡಿ.ಎಂ ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ಸನ್ಮಾನ- ಸಾಧನೆಯ ಹೆಜ್ಜೆಗಳಿಂದ ಶೈಕ್ಷಣಿಕ ಪರಂಪರೆಗೆ ಅರ್ಥವಂತಿಕೆ: ಡಾ.ವೀರೇಂದ್ರ ಹೆಗ್ಗಡೆ

0

ಉಜಿರೆ: ಶಿಸ್ತು, ಸಂಯಮ ಮತ್ತು ಜ್ಞಾನವನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಜಗತ್ತಿನ ಉಳಿದ ದೇಶಗಳಿಗಿಂತ ಭಾರತದ ವಿದ್ಯಾರ್ಥಿಗಳು ಅಗ್ರಮಾನ್ಯತೆಯನ್ನು ಪಡೆದವರು. ಇಂಥ ವಿಶೇಷ ಶೈಕ್ಷಣಿಕ ಪರಂಪರೆಯ ಅರ್ಥವಂತಿಕೆ ಹೆಚ್ಚಿಸುವ ರೀತಿಯಲ್ಲಿ ವಿದ್ಯಾರ್ಥಿಗಳು ಸಾಧನೆಯ ಹೆಜ್ಜೆಗಳನ್ನಿರಿಸಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿವೃತ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಸಾಧಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಶಿಕ್ಷಣದ ಗುಣಮಟ್ಟಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ವಿದೇಶಗಳಲ್ಲಿ ದೊರೆಯುವ ಶಿಕ್ಷಣವೇ ಶ್ರೇಷ್ಠ ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ. ವಿದೇಶದ್ದೆಲ್ಲಾ ಒಳ್ಳೆಯದು ಎಂಬ ಭಾವನೆ ಇದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಭಾರತದ ಶಿಕ್ಷಣದ ಗುಣಮಟ್ಟದ ಕುರಿತ ಕೀಳರಿಮೆಯ ದೃಷ್ಟಿಕೋನ ವ್ಯಕ್ತವಾಗುತ್ತದೆ. ಆದರೆ, ವಾಸ್ತವದಲ್ಲಿ ಭಾರತದ ಶಿಕ್ಷಣ ವ್ಯವಸ್ಥೆ ಗುಣಮಟ್ಟದ್ದಾಗಿದೆ. ಇಲ್ಲಿಯ ವಿದ್ಯಾರ್ಥಿಗಳೂ ವಿದೇಶಗಳಲ್ಲಿನ ವಿದ್ಯಾರ್ಥಿಗಳಿಗಿಂತ ಹೆಚ್ಚು ಪ್ರತಿಭಾನ್ವಿತರು. ಶಿಸ್ತು, ಸಂಯಮ ಮತ್ತು ಜ್ಞಾನದ ಜಿಜ್ಞಾಸೆ ನಮ್ಮ ವಿದ್ಯಾರ್ಥಿಗಳಲ್ಲಿ ಹೆಚ್ಚು ಎಂದು ವಿಶ್ಲೇಷಿಸಿದರು.
ವಿದೇಶಗಳಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸೋದು ಕಷ್ಟಕರ. ಭಾರತದ ವಿದ್ಯಾರ್ಥಿಗಳು ಇಲ್ಲಿಯ ಸಂಸ್ಕೃತಿಗೆ ಅನುಗುಣವಾದ ಶಿಸ್ತು, ಸಂಯಮ ರೂಢಿಸಿಕೊಂಡು ಜ್ಞಾನದ ಜಿಜ್ಞಾಸೆಯೊಂದಿಗೆ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿಯೇ ವಿದೇಶಗಳಲ್ಲಿ ಭಾರತದ ವಿದ್ಯಾರ್ಥಿಗಳ ಕುರಿತು ವಿಶೇಷ ಮಾನ್ಯತೆ ಇದೆ. ಭಾರತದ ವಿದ್ಯಾರ್ಥಿಗಳು ವಿದೇಶದಲ್ಲಿ ಕಲಿಯುವುದಕ್ಕೆ ಹೋಗದೇ ಇರುವ ಕಾರಣಕ್ಕಾಗಿಯೇ ವಿದೇಶಗಳ ಕೆಲವು ಶೈಕ್ಷಣಿಕ ವಿಭಾಗಗಳು ಮುಚ್ಚುವ ಅನಿವಾರ್ಯತೆಯನ್ನು ಎದುರಿಸುತ್ತವೆ ಎಂದರು.


ವಿದ್ಯಾಸಂಸ್ಥೆಗಳ ಗುಣಮಟ್ಟ ಹೆಚ್ಚಿಸುವುದು ಶಿಕ್ಷಕರ ಹೊಣೆಗಾರಿಕೆ. ಇದರೊಂದಿಗೆ ಆ ಗುಣಮಟ್ಟಕ್ಕೆ ಅರ್ಥವಂತಿಕೆಯನ್ನು ಒದಗಿಸಿಕೊಡುವುದು ವಿದ್ಯಾರ್ಥಿಗಳ ಕರ್ತವ್ಯ. ಕಲಿಕೆಯೊಂದಿಗಿನ ಶ್ರದ್ಧೆಯಿಂದ ಈ ಕರ್ತವ್ಯವನ್ನು ನಿರ್ವಹಿಸಬಹುದು. ಹಳೆ ತಲೆಮಾರಿನ ಶೈಕ್ಷಣಿಕ ಪರಂಪರೆಯು ಹೊಸ ಪೀಳಿಗೆಯ ಪರಿಶ್ರಮ ಮತ್ತು ಕಾಳಜಿಗಳ ನೆರವಿನೊಂದಿಗೆ ಮುಂದಡಿಯಿಡುತ್ತದೆ. ಈ ದೃಷ್ಟಿಯಿಂದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳ ಸಾಧನೆ ವಿಶೇಷವಾದುದು. ಇಲ್ಲಿ ಓದಿದ ನಂತರ ವಿದ್ಯಾರ್ಥಿಗಳು ವಿವಿಧ ವೃತ್ತಿಪರರಂಗಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಮಾರ ಹೆಗಡೆ ಬಿ.ಎ ಕಳೆದ ಮೂರು ವರ್ಷಗಳ ಅವಧಿಯ ಕಾಲೇಜಿನ ಶೈಕ್ಷಣಿಕ ಸಾಧನೆಯ ಸಮಗ್ರ ವಿವರಗಳನ್ನು ಪ್ರಸ್ತುತಪಡಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರಕುಮಾರ್ ಅವರು ಕ್ರೀಡೆ ಮತ್ತು ಇತರೆ ವಲಯಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಮತ್ತೋರ್ವ ಕಾರ್ಯದರ್ಶಿಗಳಾದ ಡಾ.ಸತೀಶ್ಚಂದ್ರ ಎಸ್, ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರವಣ್‌ಕುಮಾರ್ ಎನ್, ರಾಜೇಶ್ವರಿ ನೆಜಿಕಾರ್, ನಿತೇಶ್, ಮಾನಸ ಎಸ್.ಕೋಟ್ಯಾನ್, ಸೌಜನ್ಯ, ಧನ್ಯಶ್ರೀ ಬಿ.ಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ.ಶ್ರೀಧರ್ ಭಟ್ ನಿರೂಪಿಸಿದರು. ಉಪಪ್ರಾಂಶುಪಾಲರಾದ ಡಾ.ಶಾಂತಿಪ್ರಕಾಶ್ ವಂದಿಸಿದರು.

p>

LEAVE A REPLY

Please enter your comment!
Please enter your name here