ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ 6,374 ವಿಶೇಷ ಚೇತನರಿಗೆ ಉಚಿತ ಸಲಕರಣೆ ವಿತರಣಾ ಕಾರ್ಯಕ್ರಮ

0

ರಾಜ್ಯದಲ್ಲಿ ಸುಮಾರು 13.24 ಲಕ್ಷ ವಿಶೇಷ ಚೇತನರಿದ್ದಾರೆಯೆಂಬ ಮಾಹಿತಿಯಿದೆ. ಕೆಲವರಿಗೆ ಹುಟ್ಟಿನಿಂದಲೇ ಕುರುಡು, ಅಂಗವಿಕಲತೆ ಸಮಸ್ಯೆಗಳು ಬಂದರೆ ಇನ್ನು ಕೆಲವರಿಗೆ ದುರದೃಷ್ಟವಶಾತ್ ಅಪಘಾತಗಳು, ಮಾರಕರೋಗಗಳಿಂದ ಬರುತ್ತವೆ. ಗಂಭೀರ ಸಮಸ್ಯೆಯಿರುವ ವಿಶೇಷ ಚೇತನರ ಪಾಲನೆ ಪೋಷಣೆ, ಅತ್ಯಂತ ಕಷ್ಟಕರವಾದುದು. ಇವರ ಯೋಗಕ್ಷೇಮ ನೋಡುವುದಕ್ಕಾಗಿಯೇ ಮನೆಯಲ್ಲಿ ಒಂದೆರಡು ಮಂದಿ ಇರಬೇಕಾಗಿದೆ. ಮುಖ್ಯವಾಗಿ ಸ್ನಾನ, ಶೌಚ ಊಟೋಪಚಾರಗಳನ್ನು ಸ್ವಯಂ ಮಾಡಿಕೊಳ್ಳಲು ಸಾಧ್ಯವಾಗದ, ಎಷ್ಟೋ ಮಂದಿ ಇತರರ ಅವಲಂಬನೆಯಲ್ಲಿ ಬದುಕಬೇಕಿದೆ. ಮನೆಯಿಂದ ಹೊರಹೋಗಲಾರದೆ, ಮಲಗಿದಲ್ಲೇ ಇರುವ ವಿಶೇಷ ಚೇತನರ ಬದುಕಂತೂ ಅತ್ಯಂತ ಶೋಚನೀಯವಾಗಿರುತ್ತದೆ. ನಿತ್ಯ ಕೂಲಿ ಮಾಡಿ ಬದುಕುವ ಎಷ್ಟೋ ಕುಟುಂಬಗಳು ಇದರಿಂದಾಗಿ ಆರ್ಥಿಕ ಸಂಕಷ್ಟವನ್ನೆದುರಿಸುವುದಲ್ಲದೇ ಮಾನಸಿಕವಾಗಿಯೂ ನೊಂದಿರುತ್ತಾರೆ. ಇದನ್ನರಿತ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವಿ.ಹೆಗ್ಗಡೆಯವರು ಇವರಿಗಾಗಿಯೇ ವಿವಿಧ ಉಚಿತ ಸಲಕರಣೆಗಳನ್ನು ನೀಡುವ ಜನಮಂಗಲ ಕಾರ್ಯಕ್ರಮ ಜಾರಿಗೆ ತಂದರು. ಜನಮಂಗಲ ಕಾರ್ಯಕ್ರಮದಂತೆ ಹಾಸಿಗೆ ಹಿಡಿದು ಮಲಗಿದಲ್ಲಿಯೇ ಇದ್ದವರಿಗೆ ಹುಣ್ಣು (ಬೆಡ್ ಸೋರ್) ಆಗದಂತೆ ನೀರಹಾಸಿಗೆ (ವಾಟರ್ ಬೆಡ್), ಅಪಘಾತಕ್ಕೊಳಗಾಗಿ ನಡೆದಾಡಲು ಸಾಧ್ಯವಿಲ್ಲದವರಿಗೆ ಓಡಾಡಲು ಗಾಲಿಕುರ್ಚಿ (ವೀಲ್ ಚಯರ್), ಏಕಕಾಲಿನ ಕೈಗೋಲು (ಸಿಂಗಲ್ ಲೆಗ್ ವಾಕಿಂಗ್ ಸ್ಟಿಕ್), ಮೂರುಕಾಲಿನ ಕೈಗೋಲು (ತ್ರಿ ಲೆಗ್ ವಾಕಿಂಗ್ ಸ್ಟಿಕ್), ಹಾಸಿಗೆ ಹಿಡಿದ ರೋಗಿಗಳಿಗೆ ಸ್ನಾನಕ್ಕೆ, ಶೌಚಕ್ಕೆ ಹೋಗಲು ಗಾಲಿಕುರ್ಚಿ (ಕಮೋಡ್ ವೀಲ್ ಚಯರ್), ಅಪಘಾತಕ್ಕೊಳಗಾದವರಿಗೆ ಊರುಗೋಲು (ಆಕ್ಸಿಲರಿ ಕ್ರಚಸ್), ಸ್ಟ್ರೋಕ್ (ಪ್ಯಾರಾಲಿಸಿಸ್)ಗೆ ತುತ್ತಾದವರಿಗೆ ನಡುಗೋಲು ವಿತರಿಸಲಾಗುತ್ತಿದೆ. ಈ ಎಲ್ಲಾ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದು, ವಿಶೇಷ ಚೇತನರ ಮನೆಬಾಗಿಲಿಗೇ ತಲುಪಿಸಲಾಗುತ್ತಿದೆಯಲ್ಲದೇ ಸಲಕರಣೆಗಳ ಬಳಕೆಯ ಕುರಿತಂತೆ ಸಂಸ್ಥೆಯ ಕಾರ್ಯಕರ್ತರು ವಿವರಿಸಿ ಮಾಹಿತಿ ನೀಡುತ್ತಾರೆ.


2022-23ನೇ ಸಾಲಿನಲ್ಲಿ ಸುಮಾರು 6,374 ಸಲಕರಣೆಗಳನ್ನು ವಿತರಿಸಿದ್ದು, ಇದುವರೆಗೆ ಯೋಜನೆಯಿಂದ ಒಟ್ಟು 20,110 ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗಿದೆ. ಈ ಸಲಕರಣೆಗಳಿಂದಾಗಿ ವಿಶೇಷ ಚೇತನರ ದೈನಂದಿನ ಬದುಕಿನಲ್ಲಿ ಕನಿಷ್ಠ ಸಹಾಯವಾದರೂ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಲು ಸಾಧ್ಯವಾಗಬಹುದೆಂಬುದು ನಮ್ಮ ನಂಬಿಕೆಯಾಗಿದೆಯೆಂದು ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಹೆಚ್. ಮಂಜುನಾಥ್‌ರವರು ತಿಳಿಸಿದರು.

ವಿಶೇಷ ಚೇತನರಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿವಿಧ ಸಲಕರಣೆಗಳನ್ನು ನೀಡಲಾಗುತ್ತದೆ. ಇದರಂತೆ 2022-23ರ ಸಾಲಿನಲ್ಲಿ 6,374 ವಿವಿಧ ಉಚಿತ ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥರವರು ಹೇಳಿದರು.

LEAVE A REPLY

Please enter your comment!
Please enter your name here