ಕುವೆಟ್ಟು ಗ್ರಾ.ಪಂ ಕಛೇರಿಗೆ ಬಡಿದ ಸಿಡಿಲು- ಅಪಾರ ಹಾನಿ- ಸಿಬ್ಬಂದಿಗಳಿಗೆ ಸಿಡಿಲಿನ ಆಘಾತ

0

ಗುರುವಾಯನಕೆರೆ: ಇಂದು ಮಧ್ಯಾಹ್ನ ಕುವೆಟ್ಟು ಗ್ರಾಮ ಪಂಚಾಯತ್ ಬಳಿಯ ಟವರಿಗೆ ಸಿಡಿಲು ಬಡಿದ ಪರಿಣಾಮ ಗ್ರಾಮ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಡಿಒ ಮತ್ತು ಸಿಬ್ಬಂದಿಗಳು ಮತ್ತು ಪಂಚಾಯತ್ ಬಳಿಯ ಹಾಲ್‌ನಲ್ಲಿದ್ದ ಆಶಾ ಕಾರ್ಯಕರ್ತೆಯರು ಸಿಡಿಲಿನ ಆಘಾತಕ್ಕೆ ಒಳಗಾಗಿ, ಪಂಚಾಯತ್ ದ ವಿದ್ಯುತ್ ಸಂಪರ್ಕ ಸುಟ್ಟು ಹೋಗಿ, ಕಂಪ್ಯೂಟರ್ ಸೇರಿದಂತೆ ಇತರ ಸೋತ್ತುಗಳು ಹಾನಿಗೆ ಒಳಗಾದ ಘಟನೆ ನಡೆದಿದೆ.

ಮಧ್ಯಾಹ್ನ ಸುಮಾರು 2.30ಕ್ಕೆ ಪಂಚಾಯತ್ ಬಳಿಯ ಟವರ್‌ಗೆ ಭೀಕರ ಸಿಡಿಲು ಬಡಿದಿದೆ.ಸಿಡಿಲಿನ ಅಘಾತಕ್ಕೆ ಪಂಚಾಯತು ಬಳಿಯ ಹಾಲ್‌ನಲ್ಲಿ ಆರೋಗ್ಯ ಮತ್ತು ಗ್ರಾಮ ನೈರ್ಮಲ್ಯ ಸಮಿತಿಯ ಸಭೆಯಲ್ಲಿದ್ದ ಪಂಚಾಯತು ಸದಸ್ಯರಾದ ಮಂಜುನಾಥ ಕುಂಬ್ಲೆ, ರಚನಾ ಮತ್ತು ಆರು ಮಂದಿ ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ್ ನಲ್ಲಿದ್ದ ಪಿಡಿಒ ಗೀತಾ ಸಾಲಿಯಾನ್ ಹಾಗೂ ಸಿಬ್ಬಂದಿಗಳು ವಿದ್ಯುತ್ ಶಾಕ್‌ಗೆ ಒಳಗಾಗಿ ಒಂದು ನಿಮಿಷ ಏನೂ ನಡೆದಿದೆ ಎಂದು ತಿಳಿಯಲಾರದ ಸ್ಥಿತಿಗೆ ತಲುಪಿದ್ದರು.ಸಿಡಿಲಿನ ಅಘಾತಕ್ಕೆ ಪಂಚಾಯದ ವಿದ್ಯುತ್ ಸಂಪರ್ಕ, ಸೋಲಾರ್ ಸಿಸ್ಟಂ ಸಂಪೂರ್ಣ ಸುಟ್ಟು ಹೋಗಿದೆ.ಕಂಪ್ಯೂಟರ್ ಸೇರಿದಂತೆ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿದೆ.ಪಂಚಾಯತ್ ಬಳಿಯ ಹಾಲ್‌ನ ಗೋಡೆ ಬಿರುಕು ಬಿಟ್ಟಿದ್ದು, ಸಿಮೆಂಟಿನ ಒಂದು ಭಾಗ ಆಶಾ ಕಾರ್ಯಕರ್ತರೋರ್ವರ ಬೆನ್ನ ಮೇಲೆ ಬಿದ್ದರೂ ಯಾವುದೇ ಸಮಸ್ಯೆಯಾಗಿಲ್ಲ, ವಿದ್ಯುತ್ ಶಾಕ್‌ಗೆ ಒಳಗಾದ ಎಲ್ಲರೂ ಈಗ ಚೇತರಿಸಿಕೊಂಡಿದ್ದಾರೆ.

ಪಿಡಿಒ ಗೀತಾ ಸಾಲಿಯಾನ್ ಪ್ರತಿಕ್ರಿಯಿಸಿ ನಾನು ಸಿಡಿಲಿನ ಆಘಾತಕ್ಕೆ ಒಳಾಗಿದ್ದೆ.ಕೈ, ಕಾಲಲ್ಲಿ ಬಲ ಇಲ್ಲದ ಸ್ಥಿತಿಯಾಗಿತ್ತು, ಪಂಚಾಯತ್ ನಲ್ಲಿದ್ದ ಎಲ್ಲಾ ಸಿಬ್ಬಂದಿಗಳಿಗೂ ಈ ಅನುಭವ ಆಗಿದೆ. ಸಿಡಿಲು ಬಡಿದಾಗ ದೊಡ್ಡ ಬಾಂಬು ಸಿಡಿದಂತೆ ಶಬ್ದವಾಗಿ ಬೆಂಕಿಯ ಹುಂಡೆ ಕಾಣಿಸಿದೆ.ಪಂಚಾಯತ್ ನ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿರಬಹುದು.ಮೆಸ್ಕಾಂನವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಬಳಿಕವಷ್ಟೇ ಏನಾಗಿದೆ ಎಂದು ತಿಳಿಯಬೇಕಾಗಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here