ಉಜಿರೆ: ಪರಿಸರದ ಕುರಿತು ಹಾಗೂ ಪ್ಲಾಸ್ಟಿಕ್ ನಿಂದಾಗುವ ಅಡ್ಡಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಎಸ್.ಡಿ.ಎಂ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗವು ಜೂ.5ರಂದು ವಿಶ್ವ ಪರಿಸರ ದಿನವನ್ನು ಆಚರಿಸಿತು.
ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಮಾರ ಹೆಗ್ಡೆ ಬಿ . ಎ. ಇವರು ಪ್ಲಾಸ್ಟಿಕ್ ಎಂಬುದು ನಮ್ಮ ನಿತ್ಯ ಬಳಕೆಯ ಮೂಲಭೂತ ವಸ್ತುವಾಗಿ ಮಾರ್ಪಟ್ಟಿದ್ದು,ಇದರ ಮೇಲಿನ ಅತಿಯಾದ ಅವಲಂಬನೆ ಪರಿಸರವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವಂತಹ ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶವನ್ನು ನೀಡಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಸ್.ಡಿ.ಎಂ. ಪಿ.ಯು. ಕಾಲೇಜಿನ ಜೀವಶಾಸ್ತ್ರದ ಅಧ್ಯಾಪಕರಾದ ಶ್ರೀ ದೀಕ್ಷಿತ್ ರೈ ಇವರು ಪ್ರಕೃತಿಯಲ್ಲಿ ಉಂಟಾಗುವ ವಿಕೋಪಗಳ ಕುರಿತು ಮಾತನಾಡಿ ಅನೇಕ ಉದಾಹರಣೆಗಳ ಮೂಲಕ ವಾಸ್ತವ ಜಗತ್ತು ಹಾಗೂ ಪರಿಸರದ ಪರಿಚಯವನ್ನು ಮಾಡಿದರು. ನಮ್ಮ ವಿನಾಶಕ್ಕೆ ನಾವೇ ನಾಂದಿ ಹಾಡುತ್ತಿದ್ದು, ಶೂನ್ಯದ ಕಡೆಗೆ ಹೋಗುವುದನ್ನು ಬಿಟ್ಟು ಪೂರ್ಣತೆಯ ಕಡೆಗೆ ಚಲಿಸೋಣ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆ ಮಾಡೋಣ ಎಂಬ ಕಿವಿಮಾತನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಕುಂತಲಾ, ಶ್ರೀ ಅಭಿಲಾಷ್ ಕೆ. ಎಸ್., ಕುಮಾರಿ ಸ್ವಾತಿ ಹಾಗೂ ಕುಮಾರಿ ಮಂಜುಶ್ರೀ ಇವರು ಉಪಸ್ಥಿತರಿದ್ದರು.
ಡಾ.ಕುಮಾರ ಹೆಗ್ಡೆ ಬಿ.ಎ ಇವರು ವಿದ್ಯಾರ್ಥಿಗಳು ರಚಿಸಿದ ಇ-ಬಿತ್ತಿಪತ್ರಿಕೆಯನ್ನು ಅನಾವರಣಗೊಳಿಸಿ ಕೆಲವು ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು. ನಂತರ ವಿದ್ಯಾರ್ಥಿಗಳು ಸರಣಿಪರಿಸರಗೀತೆಗಳನ್ನು ಹಾಡಿದರು. ಪರಿಸರ ಸಂರಕ್ಷಣೆಯ ಕುರಿತು ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಸಾಧನಾ ರಾಮಕೃಷ್ಣ ಹೆಗಡೆ, ವರ್ಷ ಜೆ. ಹಾಗೂ ನಯನ ಇವರು ವಿದ್ಯಾರ್ಥಿ ಉಪನ್ಯಾಸವನ್ನು ಮಾಡಿದರು.
ಕಾರ್ಯಕ್ರಮವನ್ನು ಸಂಜನಾ ಎಸ್. ಸ್ವಾಗತಿಸಿ ಸುಪ್ರೀತ್ ಬಿ. ವಂದಿಸಿದರು. ವೀಕ್ಷಿತಾ ಕೋಟ್ಯಾನ್ ನಿರೂಪಿಸಿದರು.