ಧರ್ಮಸ್ಥಳ :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ಮೇ 31 ರಂದು ನಡೆಯಿತು.
ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ದೀಪ ಪ್ರಜ್ವಲಿಸಿ ಶಾಲಾ ಈ ಶೈಕ್ಷಣಿಕ ವರ್ಷದ ಮುಂದಿನ ಕಾರ್ಯಗಳಿಗೆ ಚಾಲನೆ ನೀಡಿದರು.
ತದನಂತರ ಮಾತನಾಡಿದ ಅವರು ವಿದ್ಯಾರ್ಥಿಗಳ ಓದು ಹಾಗೂ ಚಟುವಟಿಕೆಗಳಿಗೆ ಆ ಭಗವಂತ ಶಕ್ತಿ ನೀಡಲಿ ಎಂದು ಹಾರೈಸಿದರು.
ತದನಂತರ ಶಾಲಾ ಶಿಕ್ಷಕರಿಂದ ತಾವೇ ರಚಿಸಿದ ಹಾಡಿನ ಮುಖಾಂತರ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ. ಶಾಲೆಯ ನಿಯಮ ಹಾಗೂ ಹತ್ತು ಹಲವು ಕಾರ್ಯಕ್ರಮಗಳ ರೂಪರೇಷೆಯನ್ನು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿ ಶುಭ ಹಾರೈಸಿದರು.
ಶಾಲೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಶಾಲಾ ಸ್ವಾಗತ ದ್ವಾರ ರೈಲು ಬಂಡಿಯ ಸ್ವರೂಪವನ್ನು ಪಡೆದುಕೊಂಡು ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಜೀವನಕ್ಕೆ ಶುಭ ಹಾರೈಸುತ್ತಿತ್ತು. ಶಿಕ್ಷಕರು ಬಿಡಿಸಿದ ರಂಗೋಲಿ ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತಿತ್ತು. ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕವಾಗಿ ಪನ್ನೀರು ಚಿಮುಕಿಸಿ, ಶಾಲೆಯಲ್ಲಿ ತಯಾರಿಸಿದ ಬೀಜದದುಂಡೆಯನ್ನು ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
ಶಾಲಾ ಪ್ರಾರಂಭದ ದಿನದ ನೆನಪಿಗಾಗಿ ಫೋಟೋ ಕಾರ್ನರ್ ಕೂಡ ಸಿದ್ದಗೊಂಡಿತ್ತು. ಹಲವಾರು ಕಡೆಗಳಲ್ಲಿ ಫನ್ ಕಾರ್ನರ್ ಸ್ಟೋರಿ ಕಾರ್ನರ್ ಹೀಗೆ ವಿವಿಧ ಚಟುವಟಿಕೆಗಳು ಅಲ್ಲಲ್ಲಿ ವಿದ್ಯಾರ್ಥಿಗಳನ್ನು ರಂಜಿಸಲು ತಯಾರಿಗೊಳಿಸಲಾಗಿತ್ತು.
ಶಾಲಾ ಕೊಠಡಿಗಳು ಸಹ ಒಪ್ಪ ಓರಣವಾಗಿ ಸಿಂಗಾರಗೊಂಡಿತ್ತು. ತರಗತಿ ಕೊಠಡಿಗಳಲ್ಲೂ ಸಹ ವಿವಿಧ ಬಗೆಯ ಆಟಗಳನ್ನು ನಡೆಸಲಾಗಿತ್ತು. ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಮೊದಲ ದಿನವೇ ವೇದಿಕೆಯನ್ನು ಕಲ್ಪಿಸಿಕೊಡಲಾಗಿತ್ತು. ಒಟ್ಟಾರೆಯಾಗಿ ಶಾಲೆಯಲ್ಲಿ ಇಂದು ಹಬ್ಬದ ವಾತಾವರಣ ಮನೆ ಮಾಡಿತ್ತು. ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಮನವಿ ಮಾಡಲಾಗಿತ್ತು. ಸಂಪ್ರದಾಯಿಕ ಉಡುಗೆಯೊಂದಿಗೆ ವಿದ್ಯಾರ್ಥಿಗಳು ರಾಷ್ಟ್ರಕವಿ ಕುವೆಂಪುರವರ ನುಡಿಯ ಸರ್ವ ಜನಾಂಗದ ಶಾಂತಿಯ ತೋಟದಂತೆ ಕಂಡುಬರುತ್ತಿದ್ದರು. ಶಾಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ವತಿಯಿಂದ ಸಿಹಿತಿಂಡಿಯನ್ನು ವಿತರಿಸಿ ಮುಂದಿನ ಜೀವನ ಸದಾ ಸಿಹಿಯಾಗಿರಲಿ ಎಂದು ಹಾರೈಸಲಾಯಿತು.