



“ಕೂದಲು ತುಂಬಾ ಹೋಗಿದೆ ಕಾಡಲ್ಲಿ ಒಂದು ಸೊಪ್ಪು ಸಿಕ್ತದೆ.” ಈ ಡೈಲಾಗ್ ಕೇಳಿದರೆ ನಮಗೆ ನೆನಪಾಗುವುದು ಕಾಂತಾರ ಸಿನಿಮಾದಲ್ಲಿ ಅಭಿನಯಿಸಿದ ದೀಪಕ್ ರೈ ಪಾಣಾಜೆ ಅವರು. ವೀಕ್ಷಕರನ್ನು ನಕ್ಕು ನಗಿಸಿದ ದೀಪಕ್ ರೈ ಪಾಣಾಜೆಯವರು ಜನಿಸಿದ್ದು ಪುತ್ತೂರು ತಾಲೂಕಿನ ಪಣಾಜೆ ಗ್ರಾಮದಗುವಲ್ ಗದ್ದೆಯಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಣಜೆಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಸುಭೋದ ಪ್ರೌಢಶಾಲೆ, ಪಾಣಾಜೆಯಲ್ಲಿ ಮುಗಿಸಿದರು.ವಿವೇಕಾನಂದ ಕಾಲೇಜಿನಲ್ಲಿ ತಮ್ಮ ಪಿಯು ಪದವಿಯನ್ನು ಪಡೆದರು.ನೃತ್ಯ ಶಿಕ್ಷಣವನ್ನು ಚಾಮರಾಜ ಡಾನ್ಸ್ ಸ್ಕೂಲ್ ಬೆಂಗಳೂರಿನಲ್ಲಿ ಪಡೆದುಕೊಂಡರು.ಪ್ರಾರಂಭದಲ್ಲಿ ಇವರು ಕೆನರಾ ಟೂಲ್ ಫಾರ್ಮ್ಸ್ & ಮೈಕ್ರಾನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಏಳು ವರ್ಷ ಸೇವೆ ಸಲ್ಲಿಸಿದ್ದಾರೆ. ಅದಕ್ಕಿಂತ ಮೊದಲು ಮಚ್ಚೆಂದ್ರನಾಥ್ ಪಾಂಡೇಶ್ವರ್ ರವರ ನಿರ್ದೇಶನದ ಅಜ್ಜಿನ ಗೌಜಿ ನಾಟಕದಲ್ಲಿ ನಟಿಸಿದ್ದಾರೆ. ಬಸ್ ಕಂಡಕ್ಟರ್, ಮುದುಕನ ಮದುವೆ, ರಕ್ತ ಕಣ್ಣೀರು, ಆಪ್ತಮಿತ್ರ, ಪೊಲೀಸನ ಮಗಳು, ಕಳ್ಳ ಗುರು ಕಪಟ ಶಿಷ್ಯ, ಗೌಡ ಮೆಚ್ಚಿದ ಹುಡುಗಿ, ಎಚ್ಚರ ತಂಗಿ ಎಚ್ಚರ, ಮನೆಗೆ ಬಂದ ಮಹಾಲಕ್ಷ್ಮಿ, ತಾಳಿ ಕಟ್ಟಿದರು ಗಂಡನಲ್ಲ ಮೊದಲಾದ ನಾಟಕದಲ್ಲಿ ನಡೆಸಿದ್ದಾರೆ.ರಾಮ್ ಶೆಟ್ಟಿ ನಿರ್ದೇಶನದ ಸೂಪರ್ ಮರ್ಮಯೆ ಇವರ ಮೊದಲ ಚಿತ್ರವಾಗಿದೆ.


ಒಂದು ಮೊಟ್ಟೆಯ ಕಥೆ, ಭೂಮಿಕಾ, ಇದು ಎಂಥಾ ಲೋಕವಯ್ಯ, ಜೀವನ ಯಜ್ಞ, ಗರುಡಗಮನ ವೃಷಭ ವಾಹನ, ಹರಿಕಥೆ ಅಲ್ಲ ಗಿರಿಕಥೆ, ಕಾಂತಾರ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೆ ತುಳು ಸಿನಿಮಾದಲ್ಲೂ ಇವರು ಹಾಸ್ಯ ನಟನಾಗಿ ನಟಿಸಿದ್ದಾರೆ. ಕೊಂಕಣಿ ಚಿತ್ರ, ಅರೆಬಾಶ ಚಿತ್ರದಲ್ಲೂ ತನ್ನ ಕಲಾಪ್ರತಿಭೆಯ ಅನಾವರಣ ಮಾಡಿದ್ದಾರೆ. ಇದೀಗ ಇವರು ಎಸ್.ಎಲ್.ವಿ ಬ್ಯಾನರ್ನಡಿಯಲ್ಲಿ ಉದ್ಯಮಿ ದಿವಾಕರ್ ದಾಸ್ ನೇರ್ಲಾಜೆ ನಿರ್ಮಾಣದ ವಿನು ಬಳಂಜ ನಿರ್ದೇಶನದ ‘ಬೇರ’ ಸಿನಿಮಾದಲ್ಲಿ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.







