ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಕಾರ್ಯಕ್ರಮ ಹಾಗೂ ಧನ ಸಹಾಯ ಸಂಗ್ರಹಣಾ ಅಭಿಯಾನ

0

ಬೆಳ್ತಂಗಡಿ: ಪ್ರಥಮ ಹಂತದಲ್ಲಿ ಕ್ಯಾನ್ಸರ್ ರೋಗವನ್ನು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದಾಗ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಧೃಢ ಮನಸ್ಸು ಹಾಗೂ ಆತ್ಮವಿಶ್ವಾಸ ಇದ್ದರೆ ಕ್ಯಾನ್ಸರ್ ರೋಗವನ್ನು ಗೆಲ್ಲಬಹುದು. ಕ್ಯಾನ್ಸರ್ ರೋಗಿಗಳಿಗೆ ಸರ್ಕಾರದಿಂದ ವಿಶೇಷ ಸೌಲಭ್ಯಗಳನ್ನು ಒದಗಿಸಬೇಕು ಎಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಮ್ಯಾಥ್ಯೂ ವೆಟ್ಟಂತ್ತಡತ್ತಿಲ್ ರವರು ಅಭಿಪ್ರಾಯಪಟ್ಟರು.

ಅವರು 25 ಮೇ 2023 ರಂದು ಡಿ.ಕೆ.ಆರ್. ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ, ಎನ್ ಜಿ ವಲ್ಡ್ ಚ್ಯಾರಿಟೇಬಲ್ ಟ್ರಸ್ಟ್ (ರಿ) ಕಾರಿತಾಸ್ ಇಂಡಿಯಾ ನವದೆಹಲಿ ಪ್ರಾಯೋಜಿತ ಸ್ಪರ್ಶ ಕಾರ್ಯಕ್ರಮ, ಗ್ರಾಮ ಪಂಚಾಯತ್ ನೆಲ್ಯಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ, ಕಿರಣ್ ಮಹಿಳಾ ತಾಲೂಕು ಒಕ್ಕೂಟ (ರಿ) ಕಡಬ ಹಾಗೂ ಅಮೂಲ್ಯ ಮಹಾಸಂಘ ನೆಲ್ಯಾಡಿ ಇವುಗಳ ಆಶ್ರಯದಲ್ಲಿ ನೆಲ್ಯಾಡಿ ಪೇಟೆಯಲ್ಲಿ ನಡೆದ ಕ್ಯಾನ್ಸರ್ ರೋಗದ ವಿರುದ್ಧದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಯಾದ ಪ್ರಜ್ವಲ್ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾಗಿರುವ ವಂದನೀಯ ಫಾ. ಬಿನೋಯಿ ಎ. ಜೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಮೂಲಕ ನಡೆಸಲ್ಪಡುವ ಸ್ಪರ್ಶ- ಕ್ಯಾನ್ಸರ್ ರೋಗದ ವಿರುದ್ಧದ ಅಭಿಯಾನದ ಕುರಿತು ವಿವರಿಸಿದರು. ನೆಲ್ಯಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಮಂಜುಳಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ಫಾ. ಬಿಪಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸ್ಪರ್ಶ ಕಾರ್ಯಕ್ರಮದ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಸ್ವಾಗತಿಸಿ, ಕಿರಣ್ ಮಹಿಳಾ ತಾಲೂಕು ಒಕ್ಕೂಟ (ರಿ) ಕಡಬ ಇದರ ಅಧ್ಯಕ್ಷರಾದ ಶ್ರೀಮತಿ ಉಷಾ ಜೋಯಿ ಧನ್ಯವಾದವಿತ್ತರು. ಸಂಸ್ಥೆಯ ಕಾರ್ಯಕರ್ತರಾದ ಶ್ರೀ. ಮಾರ್ಕ್ ಡಿ’ಸೋಜಾರವರು ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕರ್ತೆ ಶ್ರೀಮತಿ ತೇಜಾವತಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಸಭಾ ಕಾರ್ಯಕ್ರಮದ ಬಳಿಕ ನೆಲ್ಯಾಡಿ ಪೇಟೆಯಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಮೈಕ್ ಉದ್ಘೋಷಣೆ ಮಾಡಿ ಸಾರ್ವಜನಿಕರಿಗೆ ಕರಪತ್ರ ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗ ಪೀಡಿತ ವ್ಯಕ್ತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಹಾಗೂ ಅಂಗಡಿ ಮುಂಗಟ್ಟುಗಳ ವರ್ತಕರಿಂದ ಧನ ಸಹಾಯ ಸಂಗ್ರಹಣೆ ಮಾಡಲಾಯಿತು. ಕಿರಣ್ ಮಹಿಳಾ ತಾಲೂಕು ಒಕ್ಕೂಟ (ರಿ) ಕಡಬ, ಅಮೂಲ್ಯ ಮಹಾಸಂಘ ನೆಲ್ಯಾಡಿ, ಆಶಾ ಕಾರ್ಯಕರ್ತೆಯರು, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳು ಹಾಗೂ ಕೇರಳದ ರಾಜಗಿರಿ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

p>

LEAVE A REPLY

Please enter your comment!
Please enter your name here