ಕಾರಿನಲ್ಲಿ ಹಣ ಸಾಗಾಟ ಮಾಡಿದ್ದ ಪ್ರಕರಣ: ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಸಹಿತ ಮೂವರ ವಿರುದ್ಧ ಎಫ್‌ಐಆರ್ ದಾಖಲು

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಕೆಲ್ಲಗುತ್ತು ಎಂಬಲ್ಲಿ ವಿಧಾನಸಭಾ ಚುನಾವಣೆಯ ಮುನ್ನಾ ದಿನವಾದ ಮೇ.9ರಂದು ತಡ ರಾತ್ರಿ ಕಾರಿನಲ್ಲಿ ಹಣ ಸಾಗಾಟ ಮಾಡಿದ ಘಟನೆಗೆ ಸಂಬಂಧಿಸಿ ನ್ಯಾಯಾಲಯದ ಅನುಮತಿಯಂತೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಚುನಾವಣಾ ಕಾರ್ಯಕ್ಕೆ ನೇಮಿಸಲಾಗಿದ್ದ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿ ಚಂದ್ರಕುಮಾರ್ ನೀಡಿರುವ ದೂರಿನಂತೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಸಹಿತ ಮೂವರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.

ಕೇಸ್‌ನ ವಿವರ:
ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಕೆಲ್ಲಗುತ್ತು ಎಂಬಲ್ಲಿ ಮೇ.9ರಂದು ತಡರಾತ್ರಿ ಕೆಎ 21 ಎನ್ 7839 ನಂಬ್ರದ ಸ್ವಿಫ್ಟ್ ಡಿಸೈರ್ ಕಾರನ್ನು ವಿಧಾನಸಭಾ ಚುನಾವಣಾ ಕಾರ್ಯಕ್ಕೆ ನೇಮಿಸಲಾಗಿದ್ದ ಫ್ಲೈಯಿಂಗ್ ಸ್ಕ್ಯಾಡ್ ಮತ್ತು ಪೊಲೀಸ್ ಇಲಾಖೆಯವರು ಪರಿಶೀಲನೆ ನಡೆಸಿದಾಗ ಚಾಲಕನ ಸೀಟಿನ ಕೆಳಗಡೆ 500 ರೂ ಮುಖ ಬೆಲೆಯ 103 ನೋಟುಗಳು ಮತ್ತು ಚಾಲಕನ ಕಿಸೆಯಲ್ಲಿ 500 ರೂ ಮುಖ ಬೆಲೆಯ 20 ನೋಟುಗಳು ದೊರೆತಿತ್ತು. ಒಟ್ಟು 61,200 ರೂಪಾಯಿ ದೊರೆತಿರುವ ಬಗ್ಗೆ ಕಾರು ಚಾಲಕ ಸಂಕೇತ್ ಹಾಗೂ ಕಾರಿನಲ್ಲಿದ್ದ ಜಯಾನಂದ ಗೌಡ ಮತ್ತು ಶರತ್‌ರವರಲ್ಲಿ ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಿರಲಿಲ್ಲ ಹಾಗೂ ಯಾವುದೇ ದಾಖಲಾತಿ ಹಾಜರು ಪಡಿಸಿಲ್ಲ. ಆದ ಕಾರಣ ನಗದು ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಕುರಿತು ಮೇ 10ರಂದು ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ ಕೆಳಂಗಡಿ ಬಸದಿ ಬಳಿಯ ಚಂದ್ರಕುಮಾರ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೆಡ್‌ಕಾನ್ಸ್‌ಟೇಬಲ್ ಧನಂಜಯರವರು ಎನ್‌ಸಿಆರ್ ನಂಬ್ರ 393/ಬಿಪಿಯಸ್/2023ರಂತೆ ದಾಖಲಿಸಿಕೊಂಡು ಹಿಂಬರಹ ನೀಡಿದ್ದರು. ನಂತರ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿ ಚಂದ್ರಕುಮಾರ್ ಬೆಳ್ತಂಗಡಿ ನ್ಯಾಯಾಲಯದ ಅನುಮತಿ ಪಡೆದುಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 36/2023ರಂತೆ ಸೆಕ್ಷನ್ 171 ಇ ಮತ್ತು 171 ಎಫ್‌ನಡಿ ಸಂಕೇತ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಮತ್ತು ಶರತ್ ವಿರುದ್ಧ ಕೇಸು ದಾಖಲಾಗಿದೆ. ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿರುವ ಕುರಿತು ಮಾಹಿತಿ ಬಂದಿದ್ದ ಹಿನ್ನೆಲೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕಾರನ್ನು ತಡೆದು ಪರಿಶೀಲನೆ ನಡೆಸಿದ್ದರು. ಬಳಿಕ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯವರು ಘಟನಾ ಸ್ಥಳಕ್ಕೆ ಆಗಮಿಸಿ ನಗದು ಮತ್ತು ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೆ, ಸಂಕೇತ್, ಜಯಾನಂದ ಗೌಡ ಮತ್ತು ಶರತ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿ ಅವರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

LEAVE A REPLY

Please enter your comment!
Please enter your name here