ಬೆಳ್ತಂಗಡಿ: ಕರ್ನಾಟಕದ 15ನೇ ವಿಧಾನಸಭಾ ಚುನಾವಣೆಗೆ ಬೆಳ್ತಂಗಡಿ ಕ್ಷೇತ್ರದಲ್ಲಿ ಮೇ.10 ರಂದು ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ.ಬೆಳ್ತಂಗಡಿ ತಾಲೂಕಿನ 241 ಬೂತ್ಗಳಲ್ಲಿಯೂ ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ದ.ಕ. ಜಿಲ್ಲಾ ಚುನಾವಣಾಧಿಕಾರಿಯಾಗಿರುವ ದ.ಕ. ಜಿಲ್ಲಾಧಿಕಾರಿ ರವಿಕುಮಾರ್, ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಬೆಳ್ತಂಗಡಿ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಯೋಗೇಶ್ ಹೆಚ್.ಆರ್ ಮತ್ತು ಉಪಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ್ ಟಿ. ಸುರೇಶ್ ಕುಮಾರ್ ಅವರು ಚುನಾವಣಾ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿಭಾಯಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ಷೇತ್ರಾದ್ಯಂತ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್ಪಿ, ಬೆಳ್ತಂಗಡಿಯ ಪೊಲೀಸ್ ಇನ್ಸ್ಪೆಕ್ಟರ್ಗಳು, ಸಬ್ಇನ್ಸ್ಪೆಕ್ಟರ್ಗಳು ವ್ಯಾಪಕ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಸಿಆರ್ಪಿಎಫ್ ಮತ್ತು ನಕ್ಸಲ್ ನಿಗ್ರಹದಳದವರು ಪೊಲೀಸ್ ಇಲಾಖೆಯೊಂದಿಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ಕೈ ಜೋಡಿಸಿದ್ದಾರೆ. ಚೆಕ್ಪೋಸ್ಟ್ಗಳಲ್ಲಿ ವಿಶೇಷ ನಿಗಾ ಇರಿಸಲಾಗಿದೆ.
ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು ಮತಗಟ್ಟೆಯಲ್ಲಿ ಓರ್ವ ಅಧ್ಯಕ್ಷಾಧಿಕಾರಿ, ಪ್ರಥಮ ಪೋಲಿಂಗ್ ಆಫೀಸರ್, ಇಬ್ಬರು ಪೋಲಿಂಗ್ ಆಫೀಸರ್ಗಳು, ಓರ್ವ ಡಿ ಗ್ರೂಪ್ ನೌಕರ ಮತ್ತು ಓರ್ವ ಬಿಎಲ್ಓ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತದಾರನ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತಿದೆ.
ಉಜಿರೆ ಎಸ್. ಡಿ.ಯಂ ಕಾಲೇಜಿನಲ್ಲಿ ಮೇ 9ರಂದು ಮಸ್ಟರಿಂಗ್ ನಡೆದಿದ್ದು ಮೇ.10 ರಂದು ರಾತ್ರಿ ಡಿ ಮಸ್ಟರಿಂಗ್ ನಡೆಯಲಿದೆ. ಮೇ.13ರಂದು ಮಂಗಳೂರು ಸುರತ್ಕಲ್ ಎನ್ಐಟಿಕೆಯಲ್ಲಿ ಮತ ಎಣಿಕೆ ನಡೆದು ಅಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.
ಉತ್ಸಾಹದಿಂದ ಮತ ಚಲಾಯಿಸುತ್ತಿರುವ ಮತದಾರರು: ರಾಜ್ಯದ ಅತೀ ದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ಬೆಳ್ತಂಗಡಿಯ 241 ಬೂತ್ಗಳಲ್ಲಿ ಒಟ್ಟು 2,28,871 ಮತದಾರರು ಹಕ್ಕು ಚಲಾಯಿಸಲು ಅವಕಾಶ ಹೊಂದಿದ್ದು ಇದರಲ್ಲಿ 1,13,774 ಪುರುಷರು, 1,15,096 ಮಹಿಳೆಯರು ಮತ್ತು ಇತರ ಓರ್ವರು ಒಳಗೊಂಡಿದ್ದಾರೆ. ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಮತದಾರರು ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಬ್ಬದ ಸಂಭ್ರಮ ಮೂಡಿಸುವ ಚುನಾವಣೆಗೆ ಬೆಳ್ತಂಗಡಿ ಕ್ಷೇತ್ರದಲ್ಲಿ ಉತ್ತಮ ಸ್ಪಂದನ ದೊರಕುತ್ತಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ 18ರಿಂದ 19 ವರ್ಷದ ಒಳಗಿನ 5,729 ಮಂದಿ ಮತದಾರರು, 20 ರಿಂದ 29 ವರ್ಷದವರೆಗಿನ 42,538 ಮಂದಿ, 30 ರಿಂದ 39 ವರ್ಷದವರೆಗಿನ 49,234 ಜನರು, 40 ರಿಂದ 49 ವರ್ಷದವರೆಗಿನ 52,306 ಮಂದಿ, 50 ರಿಂದ 59 ವರ್ಷದವರೆಗಿನ 37,831 ಮಂದಿ, 60 ರಿಂದ 69 ವರ್ಷದವರೆಗಿನ 24,695 ಮಂದಿ, 70 ರಿಂದ 79 ವರ್ಷದವರೆಗಿನ 12,175 ಮಂದಿ, 80 ರಿಂದ 89 ವರ್ಷದವರೆಗೆ 3,642 ಮತದಾರರು, 90 ರಿಂದ 99 ವರ್ಷದವರೆಗಿನ 687 ಮತದಾರರು ಮತ್ತು 100 ವರ್ಷ ದಾಟಿದ 34 ಮಂದಿ ಅಭ್ಯರ್ಥಿಯ ಭವಿಷ್ಯ ನಿರ್ಧರಿಸಲಿದ್ದಾರೆ.
ಮನೆಯಿಂದಲೇ ಮತದಾನಕ್ಕೆ ಉತ್ತಮ ಸ್ಪಂದನೆ-ಜಿಲ್ಲೆಯಲ್ಲಿ 15,354 ಮತ ಚಲಾವಣೆ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಕಲಚೇತರಿಗೆ ಮನೆಯಿಂದಲೇ ಮತದಾನ ಮಾಡಲು ವಿಶೇಷ ಅವಕಾಶ ಕಲ್ಪಿಸಿದ್ದು ಈ ಪ್ರಕ್ರಿಯೆಗೆ ದ.ಕ.ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮನೆಯಿಂದಲೇ ಮತದಾನದ ಅರ್ಹತೆ ಪಡೆದ 12,205 ಮಂದಿ ಮತ ಚಲಾಯಿಸಿದ್ದಾರೆ. ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಮತ್ತು ಸೇವಾ ಮತದಾರರಿಂದ ಅಂಚೆ ಸಹಿತ ಜಿಲ್ಲೆಯಲ್ಲಿ 15,354 ಮತಗಳು ಚಲಾವಣೆಯಾಗಿದೆ. ಈ ಎಲ್ಲಾ ಮತಗಳನ್ನು ಆಯಾ ತಾಲೂಕಿನ ಚುನಾವಣಾ ಭದ್ರತಾ ಕೊಠಡಿಗಳ ಮತ ಪೆಟ್ಟಿಗೆಗಳಲ್ಲಿ ಬಿಗಿ ಭದ್ರತೆಯಲ್ಲಿರಿಸಲಾಗಿದೆ. ಮಾರ್ಚ್ 29 ರಂದು ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟಗೊಂಡ ಬಳಿಕ ಮನೆಯಿಂದಲೇ ಮತದಾನ ಬಯಸುವವರಿಂದ ಅರ್ಜಿ ಆಹ್ವಾನಿಸಿ ಸ್ಥಳೀಯ ಬಿಎಲ್ಒಗಳ ಮೂಲಕ ಏ.17ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ನಡುವೆ ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ಬಯಸಿದವರಲ್ಲಿ 176 ಮಂದಿ ಮೃತಪಟ್ಟಿದ್ದು, 15 ಮಂದಿ ಮತದಾನ ನಡೆಸಲು ನಿರಾಕರಿಸಿದ್ದಾರೆ. ಇದಲ್ಲದೆ ಮತದಾನ ಪ್ರಕ್ರಿಯೆಗಾಗಿ ಪೋಲಿಂಗ್ ತಂಡ ಭೇಟಿ ನೀಡುವ ಸಂದರ್ಭ 393 ಮಂದಿ ಮನೆಗಳಲ್ಲಿ ಲಭ್ಯವಿಲ್ಲದ ಕಾರಣ ಮತದಾನದಿಂದ ವಂಚಿತರಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ 12,789 ಮತದಾರರು ಮನೆಯಿಂದಲೇ ಮತದಾನ ಬಯಸಿದ್ದರು. ಅವರಿಗೆ ಜಿಲ್ಲಾ ಚುನಾವಣಾ ಆಯೋಗ ಏ.29ರಿಂದ ಮತದಾನ ಪ್ರಕ್ರಿಯೆ ಆರಂಭಿಸಿತ್ತು. ಅರ್ಹತೆ ಪಡೆದ 80 ವರ್ಷ ಮೇಲ್ಪಟ್ಟ ಮತದಾರರಲ್ಲಿ 10,278 ಹಾಗೂ 1,972 ವಿಕಲ ಚೇತನ ಮತದಾರರು ಮತ ಚಲಾಯಿಸಿದ್ದಾರೆ. ಅದಲ್ಲದೆ, ಚುನಾವಣಾ ಕರ್ತವ್ಯ ನಿರತ ಅರ್ಹ 9,913 ಮತದಾರರಲ್ಲಿ 3,042 ಮಂದಿ, ಅರ್ಹ 541 ಸೇವಾ ಮತದಾರರಲ್ಲಿ ಒಬ್ಬರು, ಇತರ ಅಗತ್ಯ ಕರ್ತವ್ಯ ನಿರತ 117 ಮತದಾರರಲ್ಲಿ 106 ಮಂದಿ ಮತ ಚಲಾಯಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.