ಉಜಿರೆ : ಕೇರಳದಿಂದ ತುಳುನಾಡಿಗೆ ಬಂದು ಜೀವನ ಕಂಡುಕೊಂಡಿರುವ ಅನೇಕ ಬಂಧುಗಳು ತಮ್ಮ ಸಂಸ್ಕೃತಿಯನ್ನು ತುಳುನಾಡಿಗೂ ಪರಿಚಯಿಸಿದ್ದಾರೆ.ವಿಷು ಹಬ್ಬ ಕೇವಲ ಆಚರಣೆಗಾಗಿ ಮಾತ್ರ ಉಳಿಯದೆ ಹಿರಿಯರು ಹಾಕಿಕೊಟ್ಟ ಸಂಸ್ಕಾರವನ್ನು ಮುನ್ನಲೆಗೆ ತಂದು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವಾಗಬೇಕು ಎಂದು ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.
ಬೆಳ್ತಂಗಡಿ ತಾಲೂಕು ವಿಷು ಕಣಿ ಆಚರಣಾ ಸಮಿತಿ ವತಿಯಿಂದ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಎ.9 ರಂದು ಹಮ್ಮಿಕೊಂಡ ಕೇರಳದ ಸಾಂಪ್ರದಾಯಿಕ ವಿಷು ಕಣಿ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಕೇರಳಕ್ಕೆ ತುಳುನಾಡಿಗೂ ಸಂಸ್ಕೃತಿ-ಸಂಸ್ಕಾರ ಭಾಷೆಯಿಂದ ಹಿಡಿದು ನೂರಾರು ವರ್ಷಗಳ ಸಂಬಂಧವಿದೆ.ಸೌರಮಾನ ಪದ್ಧತಿಯಂತೆ ತುಳುನಾಡಿನಲ್ಲಿ ವಿಷುವಿನಿಂದ ವರ್ಷಾರಂಭಗೊಳ್ಳುತ್ತದೆ.ಅಂತಹಾ ಹಬ್ಬವನ್ನು ಬೆಳ್ತಂಗಡಿ ತಾಲೂಕಿನ ವಿಷು ಹಬ್ಬ ಆಚರಣಾ ಸಮಿತಿ ಎರಡನೇ ವರ್ಷದಲ್ಲಿ ಯಶಸ್ವಿಯಾಗಿ ನಡೆದುಬಂದಿದೆ.ಹೊಸ ವರ್ಷ ನಾಡಿಗೆ ಸಮೃದ್ಧಿ ತರಲಿ, ಎಲ್ಲರಿಗೂ ಆರೋಗ್ಯ ನೀಡಲಿ ಎಂದು ಶುಭಹಾರೈಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಸುಮಾರು ನೂರು ವರ್ಷಗಳಿಂದ ಹಿಂದೆ ಹಿರಿಯರು ಕೇರಳದಿಂದ ಬಂದು ತುಳುನಾಡಿನಲ್ಲಿ ಆಶ್ರಯ ಪಡೆದಿದ್ದರು.ಆದರೂ ಎಲ್ಲರೂ ಒಂದುಗೂಡಿ ಹಬ್ಬ ಆಚರಣೆಗೆ ಕಾಲ ಕೂಡಿ ಬಂದಿರಲಿಲ್ಲ.ಕಳೆದ ವರ್ಷದಿಂದ ಸಾಮಾಜಿಕವಾಗಿ ಹಬ್ಬ ಆಚರಿಸಲು ಮುಂದಾಗಿ, ಇಂದು ಅರ್ಥಪೂರ್ಣವಾಗಿ ಆಚರಿಸುವಂತಗಿದೆ.ಎಲ್ಲರೂ ಸಂತೋಷದ ಜೀವನ ನಡೆಸುವಂತಾಗಲಿ ಎಂದು ಶುಭಹಾರೈಸಿದರು.
ಉದ್ಯಮಿಗಳಾದ ಪ್ರಸಾದ್ ಬಿ.ಎಸ್., ಅನಿಲ್ ಕುಮಾರ್, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷ ಪ್ರಸಾದ್, ಸದಸ್ಯ ದಿನೇಶ್ ನೆಕ್ಕರೆ, ಕಳೆಂಜ ಗ್ರಾ.ಪಂ.ಅಧ್ಯಕ್ಷ ಪ್ರಸನ್ನ, ಪುದುವೆಟ್ಟು ಗ್ರಾ.ಪಂ.ಸದಸ್ಯ ರಾಮೇಂದ್ರನ್, ತೋಟತ್ತಾಡಿ ಎಸ್.ಎನ್.ಡಿ.ಪಿ. ಸುರೇಶ್, ದಿವಿನೇಶ್ ಚಾರ್ಮಾಡಿ, ರಿಜೇಶ್ ಗುರುವಾಯನಕೆರೆ, ಪ್ರಕಾಶ್ ನೆಕ್ಕರೆ, ಉಪನ್ಯಾಸಕ ಶೈಲೇಶ್, ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಪ್ರಕಾಶ್, ಕೃಷ್ಣ ಕುಮಾರ್ ತೋಟತ್ತಾಡಿ, ಅಖಿಲ್ ತೋಟತ್ತಾಡಿ, ಸುಧಿ ಚಾರ್ಮಡಿ, ಸೋಮನ್ ಕಕ್ಕಿಂಜೆ ಮತ್ತಿತರರು ಉಪಸ್ಥಿತರಿದ್ದರು.
ಕೇರಳದ ಸಾಂಪ್ರದಾಯಿಕ ತಿರುವಾದಿರ ನೃತ್ಯ ಪ್ರದರ್ಶನಗೊಂಡಿತು.ಸಾಧಕ ಮಕ್ಕಳನ್ನು ಗೌರವಿಸಲಾಯಿತು.ಕೇರಳದ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಒಟ್ಟು 25 ಬಗೆಯ ಕೇರಳ ಸಾಂಪ್ರದಾಯಿಕ ಭೋಜನ ಉಣಬಡಿಸಲಾಯಿತು. ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು.