ಬೆಳ್ತಂಗಡಿ: ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕು, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಕಳಪೆ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮಾ. 20ರಿಂದ ನಿರಂತರವಾಗಿ ತಾಲೂಕು ಆಡಳಿತ ಕಚೇರಿ ಎದುರು ಏಕಾಂಗಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಬೆಳ್ತಂಗಡಿ ಸಿಪಿಎಂ ಸದಸ್ಯ ಶೇಖರ್ ಎಲ್. ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ ಕೇವಲ 5 ಕಡೆಗಳಲ್ಲಿ ಮಾತ್ರ ಅಧಿಕೃತ ಮರಳು ಗಣಿಗಾರಿಕೆ ಅನುಮತಿ ಇದ್ದರೂ ತಾಲೂಕಿನ ನದಿ, ತೊರೆ, ತೋಡುಗಳಲ್ಲಿ ಅಕ್ರಮವಾಗಿ ಅನಧಿಕೃತವಾಗಿ ಎಗ್ಗಿಲ್ಲದೆ ಡೈಜಿಂಗ್ ಯಂತ್ರ, ಜೆಸಿಬಿ ಯಂತ್ರಗಳನ್ನು ಬಳಸಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಗಳು ರಾಜಕೀಯ ಒತ್ತಡಕ್ಕೆ ಬಲಿಯಾಗಿ ಮೌನ ವಹಿಸಿದ್ದಾರೆ. ತಾಲೂಕಿನ ಅಭಿವೃದ್ಧಿ ಹೆಸರಿನಲ್ಲಿ ನಕಲಿ ಗುತ್ತಿಗೆ ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ. ಮತ್ತೊಂದೆಡೆ ಟೆಂಡರ್ ಕರೆಯದೆ ಕಾನೂನು ಬಾಹಿರವಾಗಿ ಅಕ್ರಮವಾಗಿ ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಡೆಸಲಾದ ಕಾಮಗಾರಿಗಳು ಈಗಾಗಲೇ ಕಳಪೆ ಕಾಮಗಾರಿಯಿಂದಾಗಿ ನೀರು ಪಾಲಾಗಿದೆ. ಈ ಮೇಲಿನ ಎಲ್ಲಾ ಆಕರಗಳ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಬೇಕಾಗಿದೆ. ಆದುದರಿಂದ ಈ ಮೇಲಿನ ಎಲ್ಲಾ ಬೇಡಿಕೆಗಳ ಈಡೇರಿಕೆಗಳ ಒತ್ತಾಯಿಸಿ ಉಪವಾಸ ನಡೆಸಲಾಗುವುದು ಎಂದು ಶೇಖರ್ ತಿಳಿಸಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ಆಗ್ರಹಿಸಿ ಮಾ.20ರಿಂದ ಉಪವಾಸ ಸತ್ಯಾಗ್ರಹ- ಶೇಖರ್ ಎಲ್.
p>