





ಬೆಳ್ತಂಗಡಿ: ಸ್ಥಾನಿಕ ಬ್ರಾಹ್ಮಣ ಮಹಾಮಂಡಲ (ರಿ) ಮಂಗಳೂರು ಮತ್ತು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬೆಳ್ತಂಗಡಿಯ ಲಾಯಿಲದಲ್ಲಿ ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ ಆಯೋಜಿಸಲಾಗಿದೆ. ಮಾ. 4 ಮತ್ತು 5 ರಂದು ಕಾರ್ಯಕ್ರಮ ಆಯೋಜಿಸಲಾಗಿದೆ.
ಅವಿಭಜಿತ ದಕ್ಷಿಣ ಕನ್ನಡದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಸನ್ಮಾನ ನಡೆಸಲಾಗುವುದು, ಇದರ ಜೊತೆ ವಿವಿಧ ಗೋಷ್ಠಿಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಫೆ. 28 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.
ವಿಶ್ವದಾದ್ಯಂತ ನೆಲೆಸಿರುವ ಸ್ಥಾನಿಕ ಬ್ರಾಹ್ಮಣ ಬಾಂಧವರ ಸೌಹಾರ್ದ ಸಮ್ಮಿಲನ ,ಪರಸ್ಪರ ಸಂವಹನ, ಕಲೆ, ಸಂಸ್ಕೃತಿ, ಪರಂಪರೆ ಪಾಠ-ಪ್ರವಚನ, ಸನಾತನ ಧರ್ಮ ಬೋಧೆ, ಸಹಕಾರ, ಸಂಘಟನಾ ಮನೋಭಾವ ಬೆಳೆಸುವ, ಅನುಭವಗಳನ್ನು ಹಂಚಿಕೊಳ್ಳುವ ,ಯುವಜನತೆಯಲ್ಲಿ ಧಾರ್ಮಿಕ, ಸಾಮಾಜಿಕ, ನೈತಿಕ ಮೌಲ್ಯಗಳ ಉದ್ದೀಪನ, ಅಭಿವೃದ್ಧಿ ಕುರಿತ ಚಿಂತನ ಮಂಥನ, ಸ್ಥಾನಿಕ ಬ್ರಾಹ್ಮಣ ರ ಮೂಲ ಚರಿತ್ರೆಯ ಅರಿವು, ಸಾಧಕ ಸನ್ಮಾನದ ಉದ್ದೇಶಗಳನ್ನು ಇಟ್ಟುಕೊಂಡು ಈ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾವೇಶ ಸಮಿತಿಯ ಗೌರಾವಾಧ್ಯಕ್ಷರಾದ ಜಗನ್ನಿವಾಸ ರಾವ್ ಮಾತನಾಡಿ, ನಮ್ಮ ಸಮಾಜವನ್ನು ಒಂದುಗೂಡಿಸಿ ಸಹಕಾರ ಮನೋಭಾವನೆ ಮೂಡಿಸುವುದೇ ಉದ್ದೇಶ ಎಂದರು. ಇದರ ಜೊತೆ ಸಂಸ್ಕಾರ, ಸಂಸ್ಕೃತಿ ಯ ರಕ್ಷಣೆಯಲ್ಲಿ ಮಾತೆಯರ ಜವಾಬ್ದಾರಿ ಎಂಬ ಮಹಿಳಾ ವಿಚಾರಗೋಷ್ಠಿ, ಪ್ರಸ್ತುತ ಕಾಲಘಟ್ಟದಲ್ಲಿ ಹಿರಿಯ ನಾಗರಿಕ ಜವಾಬ್ದಾರಿ ವಿಷಯದಲ್ಲಿ ಗೋಷ್ಠಿ, ಯುವ ವಿಚಾರ ಗೋಷ್ಠಿಗಳು ನಡೆಯಲಿದೆ ಎಂದರು.


ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆ:
ಮಾ. 4ರಂದು ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಹೊರನಾಡು ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಶುಭಾಶಂಸನೆ ನೀಡಲಿದ್ದಾರೆ ಎಂದು ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿಯ ಅಧ್ಯಕ್ಷರಾದ ರಾಧಾಕೃಷ್ಣ ರಾವ್ ಧರ್ಮಸ್ಥಳ ತಿಳಿಸಿದ್ರು.
- ಸಮಾರೋಪದಲ್ಲಿ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ವಿಧುಶೇಖರ ಭಾರತೀ ಸ್ವಾಮೀಜಿ ಆಗಮನ,ಆಶೀರ್ವಚನ
ಮಾ.5ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ವಿಧುಶೇಖರ ಭಾರತೀ ಸ್ವಾಮೀಜಿ ಆಗಮಸಿ, ಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಉಡುಪಿಯ ಚಿಟ್ಟಾಡಿ ಸರ್ವೋತ್ತಮ ರಾವ್ ರವರಿಗೆ ಸ್ಥಾನಿಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಅಧ್ಯಕ್ಷರಾದ ದೇವಾನಂದ ಭಟ್ ಬೆಳುವಾಯಿ ತಿಳಿಸಿದರು.
ಡೆನ್ಮಾರ್ಕ್, ದುಬೈ, ಆಸ್ಟ್ರೇಲಿಯಾ, ಕೆನಡ ವಿವಿಧ ದೇಶಗಳಲ್ಲಿ ಸಂಯೋಜಕರಿದ್ದಾರೆ. ಅಲ್ಲಿರುವ ನಮ್ಮವರನ್ನು ಒಂದುಗೂಡಿಸುತ್ತಾ,ಈ ಸಮ್ಮೇಳನದಲ್ಲಿ ಆನ್ ಲೈನ್ ಮೂಲಕ ಭಾಗಿಯಾಗಲಿದ್ದಾರೆ ಎಂದು ಸಮಾವೇಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ ಕೆ ಧನಂಜಯ ರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾಮಂಡಲದ ಪ್ರಮುಖರಾದ ಮುರುಳೀಧರ್ ಶರ್ಮ ನಿಟ್ಟೆ, ಎಂ ಎಸ್ ನಟರಾಜ್, ಉದಯಕುಮಾರ್, ದಿನೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಮಾವೇಶ ಸಮಿತಿಯ ಗೌರವ ಸಲಹೆಗಾರರಾದ ಅರುಣ್ ಕುಮಾರ್ ದಿಶಾ ಧನ್ಯವಾದವಿತ್ತರು.








