ಮಚ್ಚಿನ: ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನದ ಉಪಹಾರ ಯೋಜನೆಯಡಿ ಸಾಮಾಜಿಕ ಪರಿಶೋಧನೆಯ ಪಾಲಕರ ಗ್ರಾಮ ಸಭೆಯು ಫೆ.15 ರಂದು ಮಚ್ಚಿನ ಸ.ಉ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.
5 ದಿನಗಳಿಂದ ಸುಮಾರು 126 ವಿದ್ಯಾರ್ಥಿಗಳ ಮನೆಗಳಿಗೆ ಸಾಮಾಜಿಕ ಪರಿಶೋಧನ ತಂಡವು ಭೇಟಿ ನೀಡಿ ಶಾಲೆಯಲ್ಲಿ ನೀಡುತ್ತಿರುವ ಆಹಾರದ ಕುಂದು ಕೊರತೆಗಳ ಬಗ್ಗೆ ಪೋಷಕರಲ್ಲಿ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ಸರಕಾರಕ್ಕೆ ನೀಡಲಾಗುವುದು. ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ದೂರ ಮಾಡುವ ದೃಷ್ಟಿಯಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದು ತಾಲೂಕು ಸಾಮಾಜಿಕ ಪರಿಶೋಧನಾ ವ್ಯವಸ್ಥಾಪಕ ರಾಜೀವ್ ಸಾಲಿಯಾನ್ ತಿಳಿಸಿದರು.
ಗ್ರಾಮ ಪಂಚಾಯತ್‌ನಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಶಾಲೆಯಲ್ಲಿ ಕೈತೋಟದಲ್ಲಿ ತರಕಾರಿ ಬೆಳೆಯಲು ಅವಕಾಶ ಇದೆ ಇದರ ಸದುಪಯೋಗವನ್ನು ಮಕ್ಕಳ ಪೋಷಕರು, ಶಾಲಾ ಸಮಿತಿಯವರು ಪಡೆದುಕೊಳ್ಳುವಂತೆ ಹಾಗೂ ಅಡುಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಿಸುವಂತೆ ವರದಿಯಲ್ಲಿ ಸೇರಿಸುವಂತೆ ಮತ್ತು ಗ್ರಾಮ ಪಂಚಾಯತ್‌ನಿಂದ ಈ ಬಗ್ಗೆ ಸರಕಾರಕ್ಕೆ ಮನವಿ ನೀಡುವುದಾಗಿ ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ತಿಳಿಸಿದರು. ಮಕ್ಕಳ ಪೋಷಕರು ಮಾತನಾಡಿ ಸರಕಾರದಿಂದ ಬರುವ ಅಕ್ಕಿ ಸಾಂಬರು ಬೇಳೆ ಪದಾರ್ಥಗಳು ಉತ್ತಮ ಗುಣಮಟ್ಟದಲ್ಲಿ ನೀಡುವಂತೆ ಒತ್ತಾಯಿಸಿದರು.
ಅಡುಗೆಗೆ ಶುದ್ಧ ತೆಂಗಿನ ಎಣ್ಣೆ, ಶುದ್ಧ ಆಹಾರ ನೀಡುವಂತೆ ಮತ್ತು ಸರಕಾರದ ನಿಯಮದ ಪ್ರಕಾರ ಪ್ರತಿ ಮಗು 100 ಗ್ರಾಂ ಮಧ್ಯಾಹ್ನದ ಊಟವನ್ನು 50 ಗ್ರಾಂ ಇಳಿಸುವಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪರಮೇಶ್ವರ ತಿಳಿಸಿದರು. ಮಕ್ಕಳಿಗೆ ಊಟ ಮಾಡಲು ಭೋಜನಾ ಶಾಲೆ ನಿರ್ಮಾಣ, ಶುದ್ಧ ಕುಡಿಯುವ ನೀರು ನಿರ್ಮಾಣ, ಮಕ್ಕಳಿಗೆ ತೋಗರಿ ಬೇಳೆ, ಹೆಸರುಕಾಳು, ಕಡಲೆಕಾಯಿ ನೀಡುವಂತೆ ವರದಿಯಲ್ಲಿ ಸೇರಿಸುವಂತೆ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ತಿಳಿಸಿದರು.
ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಉಷಾಲತಾ ಮತ್ತು ಸೌಮ್ಯ ಸರಕಾರಕ್ಕೆ ಸಲ್ಲಿಸುವಂತ ವರದಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುಮಲತಾ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಶಾಲಾ ಮುಖ್ಯ ಶಿಕ್ಷಕ ವಿಠಲ್ ಬಿ., ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸದಾನಂದ, ರಫೀಕ್, ಹನೀಫ್, ಅಬುಬಕ್ಕರ್, ಕವಿತ, ಸುಮಯ್ಯ, ಮಾಲತಿ, ಚಿಕ್ರವತಿ, ಕಿರಣ್ ಕುಮಾರ್, ಶಿವ, ವಿದ್ಯಾ, ಪೋಷಕರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.