ಚಾರ್ಮಾಡಿ: ಕಕ್ಕಿಂಜೆ ಪೇಟೆಯಿಂದ ಸಾಮಾನು ಖರೀದಿಸಿ, ಮನೆಗೆ ಹೋಗಲು ನದಿ ದಾಟುತ್ತಿದ್ದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜ.24ರಂದು ಚಾರ್ಮಾಡಿಯಲ್ಲಿ ನಡೆದಿದೆ.
ಚಾರ್ಮಾಡಿ ಗ್ರಾಮದ ಕೊಳಂಬೆ ಪಾದೆ ಮನೆಯ ನಿವಾಸಿ ಧರ್ಮಣ ಪೂಜಾರಿ (50ವ) ಈ ದುರ್ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ. ಈ ಬಗ್ಗೆ ಮೃತರ ಪುತ್ರ ದೀಪಕ್ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನಲೆ: ಚಾರ್ಮಾಡಿ ಗ್ರಾಮದ ಕೊಳಂಬೆ ಪಾದೆ ಮನೆ ನಿವಾಸಿ ಧರ್ಮಣ ಪೂಜಾರಿ ಅವರು ಜ.23 ರಂದು ಕಕ್ಕಿಂಜೆ ಪೇಟೆಯಲ್ಲಿ ಮನೆಗೆ ಬೇಕಾದ ಸಾಮಾನು ಖರೀದಿಸಿ, ಕೊಳಂಬೆ ಪಾದೆಯ ತಮ್ಮ ಮನೆಗೆ ಬರುತ್ತಿದ್ದರು. ಮನೆಯ ಸಮೀಪದಲ್ಲಿರುವ ನದಿ ದಾಟುತ್ತಿರುವ ಸಂದರ್ಭದಲ್ಲಿ ಅವರು ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿದವರನ್ನು ಮೇಲೆತ್ತಿ ಆರೈಕೆ ಮಾಡಿ ಬಳಿಕ ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿ, ಅಲ್ಲಿಯ ವೈದ್ಯರ ಸೂಚನೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಜ. 24 ರಂದು ಸಂಜೆ ಮೃತಪಟ್ಟರೆಂದು ಅವರ ಪುತ್ರ ದೀಪಕ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೀಪಕ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ನದಿ ದಾಟುತ್ತಿದ್ದ ವ್ಯಕ್ತಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
p>