ಬೆಳ್ತಂಗಡಿ ಚಿತ್ಪಾವನ ಬ್ರಾಹ್ಮಣರ ಬಳಗದ 11ನೇ ವರ್ಷದ ವಾರ್ಷಿಕೋತ್ಸವ

0

ಬೆಳ್ತಂಗಡಿ: ಚಿತ್ಪಾವನರು ಸಂಘಟಿತರಾಗುವುದರ ಜೊತೆಗೆ ಶಿಕ್ಷಣದಿಂದ ಜ್ಞಾನವಂತರಾಗಿ ಸಮಾಜದ ಉನ್ನತಿಗೆ ಕಾರಣರಾಗಬೇಕು ಎಂದು ಕೊಪ್ಪ ಸ.ಪ.ಪೂ.ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾl ಮಹೇಶ್ ಕಾಕತ್ಕರ್ ಹೇಳಿದರು.
ಅವರು ಜ.8 ರಂದು ಲಾಯಿಲದ ಸುಬ್ರಹ್ಮಣ್ಯ ಸಭಾಭವನದಲ್ಲಿ ನಡೆದ ಚಿತ್ಪಾವನ ಬ್ರಾಹ್ಮಣರ ಬಳಗ ಉಜಿರೆ-ಬೆಳ್ತಂಗಡಿ ಇದರ 11 ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ಪಾವನರ ಮೂಲದ ಬಗ್ಗೆ ಹಾಗೂ 19 ಶತಮಾನದಲ್ಲಿದ್ದ ಅವರ ಸಾಮಾಜಿಕ, ಆರ್ಥಿಕ, ಧಾರ್ಮಿಕ ವಿಚಾರಗಳ ಬಗ್ಗೆ ತುಲನಾತ್ಮಕ ಅಧ್ಯಯನ ಆಗಬೇಕಾಗಿದೆ ಎಂದರು.
ಅತಿಥಿಗಳಾಗಿದ್ದ ಕರ್ನಾಟಕ ಬ್ಯಾಂಕ್ ಮುಖ್ಯ ಕಚೇರಿಯ ಉಪ ಪ್ರಧಾನ ಪ್ರಬಂಧಕಿ ಸುಮನಾ ಘಾಟೆ ಅವರು ಮಹಿಳೆಯರು ಸ್ವತಂತ್ರ ಚಿಂತನೆಯೊಂದಿಗೆ ಜವಾಬ್ದಾರಿಗಳ ಬಗ್ಗೆಯೂ ಅರಿವು ಮೂಡಿಸಿಕೊಳ್ಳಬೇಕು ಎಂದರು. ಬೆಳ್ತಂಗಡಿ ಕರಾಡ ಬ್ರಾಹ್ಮಣ ಸಮಾಜ ಇದರ ಅಧ್ಯಕ್ಷ ಪ್ರದೀಪ ನಾವೂರು ಅವರು ಸಂಸ್ಕಾರದಿಂದ ದೂರವಾದಲ್ಲಿ ಬ್ರಾಹ್ಮಣ್ಯ ಅರಳಲು ಸಾಧ್ಯವಿಲ್ಲ. ನಾವೆಲ್ಲ ಅಂತರ್ವೀಕ್ಷಣೆ ಮಾಡಬೇಕಾದ ಸಮಯ ಬಂದಿದೆ ಎಂದರು.
ಬಳಗದ ಅಧ್ಯಕ್ಷ ಯೋಗೀಶ್ ಭಿಡೆ ಅಧ್ಯಕ್ಷತೆ ವಹಿಸಿದ್ದರು. ಪಾಕ ಪ್ರವೀಣ ಪಾಂಡುರಂಗ, ವೀಣಾ ಕಾಕತ್ಕರ್ ಅವರನ್ನು ವಿಶೇಷವಾಗಿ ಸಮ್ಮಾನಿಸಲಾಯಿತು. ಬಳಗದ ವಿವಿಧ ಕ್ಷೇತ್ರದಲ್ಲಿನ ಸಾಧಕ ಸದಸ್ಯರನ್ನು, ಬಾಲ ಪ್ರತಿಭೆಗಳನ್ನು ಗೌರವಿಸಲಾಯಿತು.
ಬಳಗದ ಗೌರವಾಧ್ಯಕ್ಷ ಶಂಕರ ಪಟವರ್ಧನ್ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ಶೆಂಡ್ಯೆ ವಾರ್ಷಿಕ ವರದಿಯನ್ನು, ಕೋಶಾಧಿಕಾರಿ ಶ್ರೀಕಾಂತ ಗೋರೆ ಲೆಕ್ಕಪತ್ರವನ್ನು ಮಂಡಿಸಿದರು. ಉಪಾಧ್ಯಕ್ಷ ವೆಂಕಟೇಶ ತುಳಪುಳೆ ವಂದಿಸಿದರು. ವೀಣಾ ಕೇಳ್ಕರ್, ಶುಭಪ್ರದಾ ಶೆಂಡ್ಯೆ, ಸಂದೀಪ ಪಟವರ್ಧನ್ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here