ಉಜಿರೆ: ಉಜಿರೆ ಸಮೀಪದ ನೀರ ಚಿಲುಮೆ ಎಂಬಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೀರಚಿಲುಮೆಯ ನರ್ಸರಿಯಲ್ಲಿ ಮಣ್ಣಿನ ಅಡಿಯಲ್ಲಿ ಡಿ.21ರಂದು 28 ಮೊಟ್ಟೆಗಳು ಪತ್ತೆಯಾಗಿವೆ. .
ಗಿಡಗಳನ್ನು ಬೆಳೆಸಲು ತಂದು ರಾಶಿ ಹಾಕಿರುವ ಮಣ್ಣಿನ ಅಡಿಯಲ್ಲಿ ಮೊಟ್ಟೆಗಳು ಪತ್ತೆಯಾಗಿದೆ. ಬೆಳಿಗ್ಗೆ ನರ್ಸರಿ ತೊಟ್ಟೆಗಳಿಗೆ ಮಣ್ಣನ್ನು ತುಂಬುತ್ತಿರುವ ವೇಳೆಯಲ್ಲಿ ಕೆಲಸಗಾರರು ಮೊಟ್ಟೆಯನ್ನು ಗುರುತಿಸಿದ್ದು ಇದನ್ನು ಗಮನಿಸಿದ ನರ್ಸರಿಯ ಯೋಜನಾಧಿಕಾರಿ ದಯಾನಂದ್ ಇವರು ಜನಜಾಗೃತಿ ಪ್ರಾದೇಶಿಕ ಕಚೇರಿಯ ವಿಪತ್ತು ನಿರ್ವಹಣಾ ವಿಭಾಗಕ್ಕೆ ಮಾಹಿತಿ ನೀಡಿದ್ದರು. ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್ ಇವರು ಸ್ಥಳಕ್ಕೆ ಭೇಟಿ ನೀಡಿ ಧರ್ಮಸ್ಥಳದ ಶೌರ್ಯ ಸಮಿತಿಯ ಮಾಸ್ಟರ್ ಹಾಗೂ ಉರಗ ಪ್ರೇಮಿ ಸ್ನೇಕ್ ಪ್ರಕಾಶ್ ಇವರಿಗೆ ಮಾಹಿತಿ ನೀಡಿದ್ದರು. ಬೆಳ್ತಂಗಡಿಯ ಉರಗ ಪ್ರೇಮಿ ಅಶೋಕ ಇವರಲ್ಲಿಯೂ ಈ ಬಗ್ಗೆ ಚರ್ಚಿಸಿ ಸುರಕ್ಷಿತವಾಗಿ ಸಂರಕ್ಷಿಸುವ ಬಗ್ಗೆ ಮಾಹಿತಿ ಪಡೆದಿದ್ದರು.
ಅಲ್ಲದೇ ಸರಿಯಾದ ಮಾಹಿತಿ ಪಡೆಯುವ ಉದ್ದೇಶದಿಂದ ಸ್ಥಳಕ್ಕೆ ಧಾವಿಸಿದ ಸ್ನೇಕ್ ಪ್ರಕಾಶ್ ಇವರು ಪುತ್ತೂರಿನ ರವೀಂದ್ರ ನಾಥ್ ಐತಾಳ ಇವರಿಗೆ ಪತ್ತೆಯಾದ ಮೊಟ್ಟೆಯ ಬಗ್ಗೆ ಮಾಹಿತಿ ನೀಡಿದಾಗ ಅವರು ಮೊಟ್ಟೆ ಗಳನ್ನು ಸುರಕ್ಷಿತವಾಗಿ ತಂಪಾದ ಮಣ್ಣಿನ ಅಡಿಯಲ್ಲಿ ಇಟ್ಟಿರಬೇಕು. ಸುಮಾರು 60-70 ದಿನದಲ್ಲಿ ಮೊಟ್ಟೆಗಳು ಮರಿಯಾಗುತ್ತದೆ. ಬಿಸಿಲು ಸ್ಥಳ ಇದ್ದಲ್ಲಿ ಮೊಟ್ಟೆ ಗಳು ಹಾಳಾಗಬಹುದು ಎಂದಿದ್ದರು. ಸುರಕ್ಷಿತವಾಗಿ ಮೊಟ್ಟೆ ಯನ್ನು ತಂದು ಕೊಟ್ಟಲ್ಲಿ ಮರಿ ಮಾಡಿಸಿ ತಾವೇ ಬಿಡುವುದಾಗಿ ಮಾಹಿತಿ ನೀಡಿದರು. ಈ ವೇಳೆ ಆಗಮಿಸಿದ ಫಾರೆಸ್ಟರ್ ರವೀಂದ್ರ ಹಾಗೂ ಯತೀಂದ್ರ ಮೊಟ್ಟೆಗಳನ್ನು ಪುತ್ತೂರಿನ ಐತಾಳ್ ರವರಿಗೆ ನೀಡುವಂತೆ ಸಲಹೆ ನೀಡಿದರು ಮತ್ತು ಇದಕ್ಕೆ ಸ್ಪಂದಿಸಿದ ಸ್ನೇಕ್ ಪ್ರಕಾಶ್ ಇವರು ಮೊಟ್ಟೆ ಗಳನ್ನು ಪುತ್ತೂರಿಗೆ ಒಯ್ದು ಐತಾಳ ಇವರಿಗೆ ಕೊಟ್ಟು ಬಂದಿರುತ್ತಾರೆ. ಕೋಳಿ ಮೊಟ್ಟೆ ಗಾತ್ರಕ್ಕಿಂತ ಚಿಕ್ಕದಾದ ಉದ್ದನೆಯ ಮೊಟ್ಟೆ ಇದಾಗಿದ್ದು , ಉಡದ ಮೊಟ್ಟೆ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.