ಉಜಿರೆ: ಶ್ರೀ ಧ.ಮಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 98ನೇ ವಾರ್ಷಿಕ ಪ್ರತಿಭಾ ದಿನಾಚರಣೆ

0

ಉಜಿರೆ: ಶ್ರೀ ಧ.ಮಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಉಜಿರೆ, ಇದರ 98ನೇ ವಾರ್ಷಿಕ “ಪ್ರತಿಭಾ ದಿನಾಚರಣೆಯು ” ದಿನಾಂಕ 13 – 12-2022 ರಂದು ಶಾಲೆಯ ಶ್ರೀ ಜನಾರ್ಧನ ಬಯಲು ರಂಗಮಂದಿರದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾ ಅಧಿಕಾರಿಯಾಗಿರುವ ಹರೀಶ್ ಎಂ.ವೈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ “ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಯು ಪಠ್ಯದ ಜೊತೆಗೆ ಸಹಪಠ್ಯಕ್ಕೂ ಮಹತ್ತರವಾದ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ವಾರ್ಷಿಕ ಪ್ರತಿಭಾ ದಿನಾಚರಣೆ ಎಂಬುದು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹೊಮ್ಮಿಸಲು ಇರುವ ಬಹುದೊಡ್ಡ ಅವಕಾಶ ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಕಾರ್ಯಕ್ರಮವು ಚೆನ್ನಾಗಿ ಮೂಡಿಬರಲಿ” ಎಂದು ಶುಭ ಹಾರೈಸಿದರು.

ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾಗಿರುವ ಬಿ.ಸೋಮಶೇಖರ ಶೆಟ್ಟಿ ಮಾತನಾಡಿ ” ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹಾಕುವಲ್ಲಿ ಶಿಕ್ಷಕರ ಮತ್ತು ಪೋಷಕರ ಮಹತ್ತರ ಪಾತ್ರವಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಅವರು ಪೂರ್ಣ ರೂಪದಲ್ಲಿ ಸಹಕಾರವನ್ನು ನೀಡಬೇಕು. ಎಂದು ಶುಭ ಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ, ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿರುವ ವಿಜಯ ಜಿ ಮತ್ತು ಉಪಾಧ್ಯಕ್ಷರಾಗಿರುವ ಅಬೂಬಕ್ಕರ್,ಶಿಕ್ಷಕರಕ್ಷಕ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅತಿಥಿ ಗಣ್ಯರಿಂದ ವಿದ್ಯಾರ್ಥಿಗಳ ಹಸ್ತಪ್ರತಿ “ಜ್ಞಾನಜೋತಿ” ಇದರ ಬಿಡುಗಡೆ ಕಾರ್ಯಕ್ರಮವು ಜರುಗಿತು. ಶಾಲಾ ಮುಖ್ಯ ಶಿಕ್ಷಕರು ಬಾಲಕೃಷ್ಣ ಅವರು ಶಾಲೆಯ ಕುರಿತ ವರದಿಯನ್ನು ವಾಚಿಸಿದರು.ತದನಂತರ 2021-22 ಮತ್ತು 2022-2023 ನೇ ಸಾಲಿನ ನಮ್ಮ ಶಾಲೆಯ” ಪ್ರತಿಭಾನ್ವಿತ”/ ವಿದ್ಯಾರ್ಥಿಗಳನ್ನು ಆಗಮಿಸಿದ್ದ ಅತಿಥಿ ಮಹೋದಯರಿಂದ ಪುರಸ್ಕರಿಸುವ ಕಾರ್ಯಕ್ರಮ ಜರುಗಿತು.

ನಂತರ ಅಂದಿನ ಕೇಂದ್ರ ಆಕರ್ಷಣೆಯಾದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಯಿತು. 1ನೇ ತರಗತಿಯಿಂದ ಹಿಡಿದು 7ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ವಿವಿಧ ಬಗೆಯ ನೃತ್ಯ, ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ ನೆರದಿದ್ದ ಸಭೀಕವೃಂದಕ್ಕೆ ಸಾಂಸ್ಕೃತಿಕ ಔತಣವನ್ನು ಉಣಬಡಿಸಿದರು. ಇದೇ ಸಂದರ್ಭದಲ್ಲಿ ಸಂದರ್ಭದಲ್ಲಿ, ಬೆಳಾಲು ಶ್ರೀ ಲಕ್ಷ್ಮಣ ಗೌಡ ಇವರ ಸಾರಥ್ಯದಲ್ಲಿ ಜರುಗುತ್ತಿದ್ದ ” ಶಾಲಾ ಯಕ್ಷಗಾನ ತರಬೇತಿ ಶಿಬಿರ” ಇದರ ವಿದ್ಯಾರ್ಥಿಗಳು “ ಶ್ರೀ ಕೃಷ್ಣ ಲೀಲೆ” ಎಂಬ ಪ್ರಸಂಗವನ್ನು ಪ್ರಸ್ತುತಪಡಿಸಿದರು.ಈ ವೈಭವದ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಅನುಷಾ ಮತ್ತು ಶ್ರೀಮತಿ ಪೂರ್ಣಿಮಾ ನಡೆಸಿಕೊಟ್ಟರು.

ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಹಿರಿಯ ಶಿಕ್ಷಕಿ ಗೀತಾ ಇವರು ನಡೆಸಿಕೊಟ್ಟರು. ಆಗಮಿಸಿದ ಸರ್ವರನ್ನು ಸಹ ಶಿಕ್ಷಕ ಪವನ್ ಕುಮಾರ್ ಸ್ವಾಗತಿಸಿ,ಕಾರ್ಯಕ್ರಮದ ಯಶಸ್ವಿಗೆ ಸರ್ವ ರೀತಿಯಲ್ಲಿ ಸಹಕರಿಸಿದ ಸರ್ವರಿಗೂ ಮನದಾಳದ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here