ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ವೇಣೂರು ವಲಯ ಗರ್ಡಾಡಿ ಕಾರ್ಯಕ್ಷೇತ್ರದ ಪದ್ಮಶ್ರೀ ಜ್ಞಾನವಿಕಾಸ ಕೇಂದ್ರದ 25ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ನಂದಿಬೆಟ್ಟದ ಶ್ರೀ ನಂದಿಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನ. 27ರಂದು ಜರುಗಿತು.
ನಂದಿಬೆಟ್ಟ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯೋಗೀಶ್ ಭಟ್ ಕೊಟ್ರೋಡಿ ಸಮಾರಂಭ ವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಜ್ಞಾನವಿಕಾಸದ ಕಾರ್ಯಚಟುವಟಿಕೆಗಳಿಂದ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ. ವಿದ್ಯಾಭ್ಯಾಸ ಇಲ್ಲದ ಮಹಿಳೆಯರು ಜ್ಞಾನವಂತರಾಗಿದ್ದಾರೆ ಎಂದರು.
ಗರ್ಡಾಡಿ ಎ ಒಕ್ಕೂಟದ ಅಧ್ಯಕ್ಷೆ ವಾರಿಜ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪ್ರಾದೇಶಿಕ ಕಚೇರಿಯ ಗುಂಪು ಲೆಕ್ಕಪರಿಶೋಧನೆ ವಿಭಾಗದ ಯೋಜನಾಧಿಕಾರಿ ರೂಪಾ ಜಿ. ಜೈನ್ ಮಾತನಾಡಿ, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಹೇಮಾವತಿ ಅಮ್ಮನವರ ಕನಸಿನ ಕೂಸಾಗಿದ್ದು, ಈ ಕಾರ್ಯಕ್ರಮದ ಮೂಲಕ ಮಹಿಳೆಯರು ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯದ ಬಗೆಗಿನ ಮಹತ್ವವನ್ನು ಅರಿತುಕೊಂಡಿದ್ದು, ಆರ್ಥಿಕವಾಗಿಯೂ ಸಬಲರಾಗಿದ್ದಾರೆ ಎಂದರು.
ವಲಯ ಮೇಲ್ವಿಚಾರಕಿ ಶಾಲಿನಿ, ಜ್ಞಾನ ವಿಕಾಸ ಸಮನ್ವಯಧಿಕಾರಿ ಹರಿಣಿ, ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಉಷಾ, ಓಕ್ಕೂಟ ಮತ್ತು ಜ್ಞಾನವಿಕಾಸ ಕೇಂದ್ರದ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
ಜ್ಞಾನವಿಕಾಸ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕಿರು ನಾಟಕ, ನಡೆಯಿತು ಹಾಗೂ ಆಟೋಟ ಸ್ಪರ್ಧೆ ಯಲ್ಲಿ ವೀಜೆತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು . ಶ್ರೀಮತಿ ವಸಂತಿ ವರದಿ ವಾಚಿಸಿ, ಸೇವಾಪ್ರತಿನಿಧಿ ಹೇಮಲತಾ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ನಿರೂಪಿಸಿ, ಜತೆ ಕಾರ್ಯದರ್ಶಿ ಸುಭಾಷಿಣಿ ವಂದಿಸಿದರು.