ತೋಟತ್ತಾಡಿ ‌ ನೆಲ್ಲಿಗುಡ್ಡೆ ಚಂದ್ರಶೇಖರ ಪೂಜಾರಿ ಆತ್ಮಹತ್ಯೆ ಪ್ರಕರಣ: ಆರೋಪಿಗಳನ್ನು ಬಂಧಿಸದಿದ್ದಲ್ಲಿ ನ.7ರಿಂದ ಧಮ೯ಸ್ಥಳ ಪೊಲೀಸ್ ಠಾಣೆ ಎದುರು ಪೋಷಕರ ಅಮರಾಣಾಂತ ಧರಣಿ

0

ಬೆಳ್ತಂಗಡಿ: ತೋಟತ್ತಾಡಿ ‌ಗ್ರಾಮದ ನೆಲ್ಲಿಗುಡ್ಡೆ ಆನಂದ ಪೂಜಾರಿ ಅವರ ಪುತ್ರ ಚಂದ್ರಶೇಖರ ಪೂಜಾರಿಯವರ‌ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾದ
ಆರೋಪಿಗಳನ್ನು ಮೂರು ದಿನಗಳ ಒಳಗೆ ಬಂಧಿಸದಿದ್ದಲ್ಲಿ ನ.7ರಂದು ಧಮ೯ಸ್ಥಳ ಪೊಲೀಸ್ ಠಾಣೆ ಎದುರು ಮೃತರ ಪೋಷಕರು ಅಮರಾಣಾಂತ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ನ್ಯಾಯಾವಾದಿ ಮನೋಹರ್ ಕುಮಾರ್ ಇಳಂತಿಲ ಹೇಳಿದರು.

ಅವರು ನ.4ರಂದು ಬೆಳ್ತಂಗಡಿ ಶ್ರೀ‌ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.

ಚಂದ್ರಶೇಖರ ಅವರು ಅಣಿಯೂರಿನ ಶಬರಿ ಸ್ವ ಸಹಾಯ ಸಂಘದ ಸದಸ್ಯನಾಗಿದ್ದು, ಸದ್ರಿ ಸಂಘದಲ್ಲಿ 8 ಜನ ಸದಸ್ಯರು ಕಳೆದ ವರ್ಷ ಉಜಿರೆ ಖಾಸಗಿ ಬ್ಯಾಂಕ್ ನಿಂದ ರೂ. 4 ಲಕ್ಷ ಸಾಲವನ್ನು ಪಡೆದು ಕೊಂಡಿದ್ಧು, ‌ಸದ್ರಿ ಹಣವನ್ನು 8 ಜನ ಸದಸ್ಯರುಗಳು ಹಂಚಿಕೊಂಡಿದ್ದಾರೆ. ಚಂದ್ರಶೇಖರನ ಹೆಸರಿನ ರೂ. 50ಸಾವಿರ ಯೋಗೀಶ ಎಂಬವರು ಪಡಕೊಂಡು ನಂತರ ಕಂತು ಹಣವನ್ನು ಕಟ್ಟದೆ ಚಂದ್ರಶೇಖರನೇ ಹಣ ಕಟ್ಟುವಂತೆ ತಾಕೀತು ಮಾಡಿದ್ದಾರೆ. ಚಂದ್ರಶೇಖರ ದೂರವಾಣಿ ಕರೆ ಮಾಡಿದಾಗ ಆತ ಸ್ವೀಕರಿಸುತ್ತಿರಲಿಲ್ಲ. ಮೆಸೇಜ್ ಮಾಡಿ ಹಣ ಕಟ್ಟುವಂತೆ ಕೋರಿದಾಗ ಸಹ ಆತ ಯಾವುದೇ ಸ್ಪಂದನೆ ನೀಡಿಲ್ಲ. ಅಲ್ಲದೆ ಸ್ವ ಸಹಾಯ ಸಂಘದ ಸದಸ್ಯರುಗಳಾದ ಸಚಿನ್, ಯೋಗೀಶ್, ನಾರಾಯಣ ಹಾಗೂ ಸುದರ್ಶನ್ ಎಂಬವರು ಆಗಸ್ಟ್. 23 ರಂದು ಸಂಜೆ ಚಂದ್ರಶೇಖರನು ಮನೆಯ ಕಡೆ ಬರುವಾಗ ನೆರಿಯ ಗ್ರಾಮದ ಬಯಲು ಬಸ್ಸು ನಿಲ್ದಾಣದ ಬಳಿ ಆತನನ್ನು ತಡೆದು ನಿಲ್ಲಿಸಿ ನಾವು ಸಂಘದ ಕಟ್ಟುವುದಿಲ್ಲ. ಬೇಕಿದ್ದರೆ ನೀನೇ ಕಟ್ಟು ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಆತ ಮನೆಯಲ್ಲಿ ಹೇಳಿದ್ದ, ಇದರಿಂದ ನೊಂದು ಚಂದ್ರಶೇಖರ ಆ.25 ಬೆಳಿಗ್ಗೆ ಬಚ್ಚಲು ಕೊಟ್ಟಿಗೆಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ಧ, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಸೆ.23 ರಂದು ಸುರತ್ಕಲ್‌‌ಖಾಸಗಿ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದ ಎಂದು ಆರೋಪಿಸಿ ಅವರ‌ ತಾಯಿ ಧಮ೯ಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಸಚಿನ್, ಯೋಗೀಶ್, ನಾರಾಯಣ ಹಾಗೂ ಸುದರ್ಶನ್ ಎಂಬವರ ಮೇಲೆ ಧಮ೯ಸ್ಥಳ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತಿಂಗಳು ಒಂದು ಕಳೆದರೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಅವರು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ‌ ಎಂದು ಹೇಳಿದರು.

ಆರೋಪಿಗಳು ಊರಿನಲ್ಲಿ ಈಗಲೂ ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಪೊಲೀಸರು ಯಾವುದೇ ತನಿಖೆ ನಡೆಸಿಲ್ಲ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಆದುದರಿಂದ ಮೂರು ದಿನಗಳ ಒಳಗೆ ಬಂಧಿಸದಿದ್ದಲ್ಲಿ ಕುಟುಂಬಸ್ಥರು ಮತ್ತು ಊರಿನವರು ಸೇರಿ ನ. 7 ಸೋಮವಾರ ಪೂರ್ವಾಹ್ನ ಧರ್ಮಸ್ಥಳ ಪೊಲೀಸ್ ಠಾಣೆಯ ಮುಂದೆ ಅಮರಣಾಂತ ಧರಣಿ ಕೈಗೊಳ್ಳುವುದಾಗಿ ನಿಧ೯ರಿಸಿದ್ದಾರೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಮೃತ ಚಂದ್ರಶೇಖರ ಅವರ ತಂದೆ ಆನಂದ ಪೂಜಾರಿ, ತಾಯಿ ಪುಷ್ಪ, ಸಹೋದರ ವಿನಯ ಕುಮಾರ್, ಸ್ಥಳೀಯರಾದ ಸನತ್ ಕೋಟ್ಯಾನ್, ರಾಜನ್, ಮಂಜುನಾಥ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here