ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು : ವಿಕೇರ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ಸ್‌ನಿಂದ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ- 100 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ- 52 ಅಭ್ಯರ್ಥಿಗಳು ನೇಮಕಾತಿಗೆ ಆಯ್ಕೆ ಸೌಂದರ್ಯ ಚಿಕಿತ್ಸೆಯಲ್ಲಿ ಪ್ರಕೃತಿ ಚಿಕಿತ್ಸಕರಿಗೆ ವಿಫುಲ ಅವಕಾಶ : ರಘುಪತಿ

0

ಉಜಿರೆ,ದಿ.ಅ.28 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ (SDMCNYS) ಬಿಎನ್‌ವೈಎಸ್ ಪದವೀಧರರಿಗಾಗಿ ವಿಕೇರ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ಸ್ ವತಿಯಿಂದ ಕ್ಯಾಂಪಸ್ ನೇಮಕಾತಿ ಆಯ್ಕೆ ಪ್ರಕ್ರಿಯೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಭಾ ಕಾರ್ಯಕ್ರಮವನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಆ್ಯಂಡ್ ವೆಲ್‌ನೆಸ್ ಹಾಗೂ ವಿಕೇರ್ ಚೆನ್ನೈನ ಪ್ರಭಾ ರೆಡ್ಡಿ ಬ್ಯೂಟಿ ಅಕಾಡೆಮಿಯ ಶೈಕ್ಷಣಿಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ರಘುಪತಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಇವರು, ಪ್ರಕೃತಿ ಚಿಕಿತ್ಸೆ ಮತ್ತು ಸೌಂದರ್ಯವರ್ಧಕ ಚಿಕಿತ್ಸೆಗಳು ಆರೋಗ್ಯ ಹಾಗೂ ಸೌಂದರ್ಯ ಆರೈಕೆ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ. ಪ್ರಕೃತಿ ಚಿಕಿತ್ಸೆಯ ಸಮಗ್ರ ಆರೋಗ್ಯ ದೃಷ್ಟಿಕೋನವನ್ನು ಆಧುನಿಕ ಸೌಂದರ್ಯವರ್ಧಕ ಚಿಕಿತ್ಸೆಗಳ ಪರಿಣತಿಯೊಂದಿಗೆ ಸಂಯೋಜಿಸುವುದರಿಂದ ವ್ಯಕ್ತಿಗಳ ದೈಹಿಕ ಕ್ಷೇಮ, ಮಾನಸಿಕ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಕ್ಷೇತ್ರವು ಕೇವಲ ಬಾಹ್ಯ ಸೌಂದರ್ಯಕ್ಕೆ ಸಂಬಂಧಿಸಿದ ವೃತ್ತಿಯಲ್ಲ; ವ್ಯಕ್ತಿಯ ಆರೋಗ್ಯ, ಆತ್ಮಗೌರವ, ಆತ್ಮವಿಶ್ವಾಸ ಮತ್ತು ಜೀವನಮಟ್ಟವನ್ನು ಸುಧಾರಿಸುವ ಮಹತ್ವದ ಸೇವಾ ಕ್ಷೇತ್ರವಾಗಿದೆ. ವಿಶೇಷವಾಗಿ, ಸೌಂದರ್ಯ ಆರೈಕೆಯು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವುದಕ್ಕೆ ಮಾತ್ರ ಸೀಮಿತವಾಗದೆ, ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು, ಸ್ವಾವಲಂಬನೆಗೆ ಪ್ರೇರಣೆ ನೀಡುವುದು ಮತ್ತು ಸಮಗ್ರ ಕ್ಷೇಮವನ್ನು ಉತ್ತೇಜಿಸುವುದರಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಪ್ರಕೃತಿ ಚಿಕಿತ್ಸಾ ವೃತ್ತಿಪರರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಈ ಕ್ಷೇತ್ರದಲ್ಲಿ ವೃತ್ತಿಪರ ಜ್ಞಾನ, ಪ್ರಾಯೋಗಿಕ ಕೌಶಲ್ಯ, ಮಾನವೀಯತೆ, ಸೇವಾ ಮನೋಭಾವ ಮತ್ತು ನಿರಂತರ ಕಲಿಕೆ ಅತ್ಯಂತ ಅಗತ್ಯವೆಂದು ತಿಳಿಸಿದರು.

ಆರೋಗ್ಯ ಮತ್ತು ಸೌಂದರ್ಯ ಆರೈಕೆಯ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, ಅರ್ಹ ಪ್ರಕೃತಿ ಚಿಕಿತ್ಸೆ ಪದವೀಧರರಿಗೆ ವಿವಿಧ ವೃತ್ತಿಪರ ಅವಕಾಶಗಳು ಲಭ್ಯವಾಗುತ್ತಿವೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜ್ಞಾನವನ್ನು ಪ್ರಾಯೋಗಿಕ ಅನುಭವದೊಂದಿಗೆ ಬೆಳೆಸಿಕೊಂಡು, ಹೊಸ ತಂತ್ರಜ್ಞಾನಗಳು ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಾಂತಿವನದ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಗಾಗಿ ಎಸ್.ಡಿ.ಎಂ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡ ವಿಕೇರ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ಸ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಮ್ಮ ಜ್ಞಾನ, ಸಮರ್ಪಣೆ, ಶಿಸ್ತು ಮತ್ತು ವೃತ್ತಿಪರ ನಡವಳಿಕೆಯ ಮೂಲಕ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ, ತಾವು ಕಲಿತ ಸಂಸ್ಥೆಯ ಕೀರ್ತಿ ಹಾಗೂ ಮೌಲ್ಯಗಳನ್ನು ಎತ್ತಿಹಿಡಿಯಲಿದ್ದಾರೆ.ಶಿಕ್ಷಣವು ಕೇವಲ ತರಗತಿಯ ಕಲಿಕೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ಮತ್ತು ಉದ್ಯಮದ ಅಗತ್ಯಗಳಿಗೆ ಹೊಂದಿಕೊಳ್ಳುವ ಕೌಶಲ್ಯಗಳನ್ನು ಒದಗಿಸಬೇಕು. ಶೈಕ್ಷಣಿಕ ಕಲಿಕೆ ಮತ್ತು ವೃತ್ತಿಪರ ಅಭ್ಯಾಸದ ನಡುವಿನ ಅಂತರವನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಕಾರ್ಯಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇಂತಹ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು. ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳ ನಡುವಿನ ಸಹಯೋಗವು ವಿದ್ಯಾರ್ಥಿಗಳ ಉದ್ಯೋಗಾವಕಾಶಗಳನ್ನು ವಿಸ್ತರಿಸುವುದರ ಜೊತೆಗೆ, ಅವರ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಲು ನೆರವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ದಕ್ಷಿಣ ಭಾರತ ವಲಯದ ವಿಕೇರ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ಸ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಫಿರೋಜ್ ಶರ್ಮಿಳಾ ಮಾತನಾಡಿ, ವಿಕೇರ್ ಸಂಸ್ಥೆಯ ಪರಿಚಯ ಹಾಗೂ ಬಿಎನ್‌ವೈಎಸ್ ಪದವೀಧರರಿಗೆ ಲಭ್ಯವಿರುವ ವೃತ್ತಿಪರ ಅವಕಾಶಗಳ ಕುರಿತು ಮಾಹಿತಿ ಹಂಚಿಕೊಂಡರು. ಕಾಲೇಜಿನ ಉಪಪ್ರಾಂಶುಪಾಲೆ ಹಾಗೂ ಕ್ಲಿನಿಕಲ್ ಪ್ರಕೃತಿ ಚಿಕಿತ್ಸಾ ವಿಭಾಗದ ಡೀನ್ ಡಾ. ಸುಜಾತಾ ಕೆ. ಜೆ. ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ ವಿಭಾಗದ ಡೀನ್ ಡಾ. ಬಿಂದು ಶ್ರೀಧರ್, ವಿಕೇರ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ ಮಾನವ ಸಂಪನ್ಮೂಲ ವಿಭಾಗದ ನಿವೇದಿತಾ ಹಾಗೂ ವಿಕೇರ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ ಮಂಗಳೂರಿನ ಹಿರಿಯ ಸಲಹಾ ತಜ್ಞರಾದ ಡಾ. ಸಾಯಿ ಲಕ್ಷ್ಮಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅನನ್ಯ ಭಟ್ ಪ್ರಾರ್ಥನೆ ಹಾಡಿದರು.

ವಿದ್ಯಾರ್ಥಿನಿ ಸಂಸ್ಕೃತಿ ಎಂ ಜೈನ್ ಕಾರ್ಯಕ್ರಮ ನಿರೂಪಿಸಿ, ಮೂಲ ವಿಜ್ಞಾನ ವಿಭಾಗದ ಡೀನ್, ಜೀವರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜಿನ ತರಬೇತಿ ಮತ್ತು ಉದ್ಯೋಗ ನಿಯೋಜನಾ ಅಧಿಕಾರಿಗಳಾದ ಡಾ. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿ ವಂದಿಸಿದರು.ಕೋಟ್, ” ಒಟ್ಟು 89 ಅಭ್ಯರ್ಥಿಗಳಲ್ಲಿ 52 ಅಭ್ಯರ್ಥಿಗಳು ಆಯ್ಕೆಯಾಗಿರುವುದು ಬಿಎನ್‌ವೈಎಸ್ ಪದವೀಧರರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಚರ್ಮ ಮತ್ತು ಕೂದಲಿನ ಆರೈಕೆ, ಸೌಂದರ್ಯವರ್ಧಕ ಚಿಕಿತ್ಸೆ ಹಾಗೂ ಸಮಗ್ರ ಸ್ವಾಸ್ಥ್ಯದ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ವೃತ್ತಿಪರ ಅವಕಾಶಗಳನ್ನು ಈ ನೇಮಕಾತಿ ಪ್ರಕ್ರಿಯೆ ಪ್ರತಿಬಿಂಬಿಸುವುದರ ಜೊತೆಗೆ, ಶೈಕ್ಷಣಿಕ ಸಂಸ್ಥೆಗಳು ಮತ್ತು ಆರೋಗ್ಯ ಹಾಗೂ ಸ್ವಾಸ್ಥ್ಯ ಉದ್ಯಮದ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸಿದೆ.” – ಡಾ. ಶಿವಪ್ರಸಾದ್ ಶೆಟ್ಟಿ

LEAVE A REPLY

Please enter your comment!
Please enter your name here