ಸೌತಡ್ಕ ದೇವಸ್ಥಾನದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ: ಕಾನೂನು ಕ್ರಮಕ್ಕೆ ಆಗ್ರಹ-ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯರಿಂದ ಧರ್ಮಸ್ಥಳ ಪೊಲೀಸರಿಗೆ ದೂರು

0

ಬೆಳ್ತಂಗಡಿ: ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಬಾಡಿಗೆ ನೀಡುತ್ತಿರುವ ಹಾಗೂ ಸಾರ್ವಜನಿಕ ಶಾಂತಿಭಂಗ ಉಂಟುಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಅ.19ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕರ್ನಾಟಕ ಸರಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸೌತಡ್ಕ ಕ್ಷೇತ್ರದ ಎದುರು 1993ರಲ್ಲಿ ದೇವಸ್ಥಾನಕ್ಕಾಗಿ ಕಾಯ್ದಿರಿಸಲಾಗಿದ್ದ ಸರ್ವೇ ನಂಬರ್ 215/1ರ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿ 28.08.1993ರ ದಾಖಲೆ ಸಂಖ್ಯೆ 257/92–93 ಅನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

2012ರಿಂದ 2015ರವರೆಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದ ಕೃಷ್ಣ ಭಟ್ ಅವರು ತಮ್ಮ ಅಧಿಕಾರಾವಧಿಯಲ್ಲಿ ದೇವಸ್ಥಾನದ ಜಾಗವನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ನ ಜಾಗದೊಂದಿಗೆ ಸೇರಿಸಿಕೊಂಡು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಪೂರ್ವಾನುಮತಿ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಈ ಜಾಗದಲ್ಲಿ ಐದು ಅಂಗಡಿ ಕೋಣೆಗಳನ್ನು ನಿರ್ಮಿಸಿದ್ದಾರೆ ಎಂದು ಶಬರಾಯ ಅವರು ದೂರಿನಲ್ಲಿ ಆಪಾದಿಸಿದ್ದಾರೆ.

ಈ ಅಂಗಡಿ ಕೋಣೆಗಳನ್ನು ಇತರರಿಗೆ ಬಾಡಿಗೆ ನೀಡಿ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಅಂಗಡಿಗಳನ್ನು ಬಾಡಿಗೆಗೆ ಪಡೆದವರಲ್ಲಿ ಕೆಲವರು ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದು, ದೇವಸ್ಥಾನದ ಆವರಣದಲ್ಲಿ ಪ್ರತಿನಿತ್ಯ ಜಗಳವಾಡುವ ಮೂಲಕ ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣರಾಗುತ್ತಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.

ಇಂತಹ ಘಟನೆಗಳು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುವುದರಿಂದ ಕ್ಷೇತ್ರ ಹಾಗೂ ಆಡಳಿತ ಸಮಿತಿಯ ಗೌರವಕ್ಕೆ ಧಕ್ಕೆಯಾಗುತ್ತಿದೆ. ಆದ್ದರಿಂದ ದೇವಸ್ಥಾನದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿ ವ್ಯವಹಾರ ನಡೆಸುತ್ತಿರುವವರ ಹಾಗೂ ಶಾಂತಿಭಂಗ ಉಂಟುಮಾಡುತ್ತಿರುವವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಬ್ರಹ್ಮಣ್ಯ ಶಬರಾಯ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here