






ಬೆಳ್ತಂಗಡಿ : ಸದಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು, ನೌಕರರ ಹಿತರಕ್ಷಣೆ ಹಾಗೂ ಸೌಲಭ್ಯಗಳನ್ನು ಒದಗಿಸುವ ಮೂಲಕ ಬೆಳ್ತಂಗಡಿ-ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ನೌಕರರ ಸಂಘದ ವತಿಯಿಂದ ಅಗಲಿದ ಚಾಲಕರ ಕುಟುಂಬಕ್ಕೆ ಸಾಂತ್ವನ ಮತ್ತು ಧನಸಹಾಯ ನೀಡಲಾಯಿತು.


ಖಾಸಗಿ ಬಸ್ ನೌಕರರ ಸಂಘದ ಸಕ್ರಿಯ ಸದಸ್ಯರಾಗಿ, ಚಾಲಕ ವೃತ್ತಿ ನಡೆಸುತ್ತಿದ್ದ ಗೇರುಕಟ್ಟೆ ಸಮೇಪದ ರೇಷ್ಮೆ ರೋಡ್ ನಿವಾಸಿ ಗೋಪಾಲ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ದಿಕ್ ಕೆಂಪಿ ಅವರ ನೇತೃತ್ವದಲ್ಲಿ ನಿಯೋಗವು ಮೃತರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸಂಘದ ವತಿಯಿಂದ ₹10,000 (ಹತ್ತು ಸಾವಿರ ರೂಪಾಯಿ) ಆರ್ಥಿಕ ನೆರವು ಹಸ್ತಾಂತರಿಸಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ನಾರಾಯಣ್, ಕೋಶಾಧಿಕಾರಿ ಇಲಿಯಾಸ್ ಹಾಗೂ ಸಾಮಾಜಿಕ ಜಾಲತಾಣದ ಜಯಣ್ಣ ಉಪಸ್ಥಿತರಿದ್ದರು.









