






ಶಿರ್ಲಾಲು: ಸ್ಥಳೀಯವಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ವನ್ಯ ಜೀವಿ ಒಂದನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಪ್ರಯತ್ನ ಯಶಸ್ವಿಯಾಗಿದ್ದು, ಶಿರ್ಲಾಲು ಗ್ರಾಮದ ಮಾಣಿಲದ ಪದ್ಮನಾಭ ಗೌಡ ಅವರ ಮನೆ ಹತ್ತಿರ ಚಿರತೆ ಓಡಾಟ ಇರುವ ಕಾರಣ ಗ್ರಾಮಸ್ಥರ ಮನವಿಯಂತೆ ಒಂದು ವಾರದ ಹಿಂದೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿರುವ ಬಗ್ಗೆ ಅ. 10 ರಂದು ವರದಿಯಾಗಿದೆ.
ವೇಣೂರು ವಲಯರಣ್ಯಾಧಿಕಾರಿ ಭರತ್ ಇವರ ಮಾರ್ಗದರ್ಶನದಂತೆ ಅರಣ್ಯ ಇಲಾಖೆಯವರು ಪದ್ಮನಾಭ ಗೌಡ ಅವರ ಮನೆಯ ಸಮೀಪ ಬೋನು ಅಳವಡಿಸಿದ್ದರು. ಸಂಚರಿಸುತ್ತಿದ್ದ ಚಿರತೆ ರಾತ್ರಿಯ ವೇಳೆ ಬೋನಿಗೆ ಬಿದ್ದಿದ್ದು, ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಕೊಂಚ ನಿರಾಳರಾಗಿದ್ದಾರೆ.


ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸುತ್ತಿದ್ದು, ಆರೋಗ್ಯ ತಪಾಸಣೆ ನಡೆಸಿದ ನಂತರ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗುವುದು,ಈ ಕಾರ್ಯಾಚರಣೆಯ ಯಶಸ್ಸಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯರು ಸಕ್ರೀಯವಾಗಿ ಸಹಕರಿಸಿದ್ದಾರೆ.
ಅಳದಂಗಡಿ ಶಾಖೆ (DRFO) ಹರಿಪ್ರಸಾದ್ , ಅರಣ್ಯ ವೀಕ್ಷಕರಾದ ಮಂಜುನಾಥ್ ಬಿ.ಎಸ್. ಹಾಗೂ ಸಿಬ್ಬಂದಿಗಳಾದ ಪೂವಪ್ಪ ನಾಯ್ಕ, ವೆಂಕಪ್ಪ ನಾಯ್ಕ ಮತ್ತು ವಸಂತ ಅವರು ಸ್ಥಳದಲ್ಲಿ ಸಕಾಲಿಕ ಕಾರ್ಯಾಚರಣೆ ನಡೆಸಿದರು.ಇವರೊಂದಿಗೆ ಸ್ಥಳೀಯ ಗ್ರಾಮಸ್ಥರು ಈ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡಿದರು.









