






ಸಂಜೀವಿನಿ ಸದಸ್ಯರಿಂದ 40 ಬಗೆಯ ಪೌಷ್ಟಿಕ ಆಹಾರ ತಯಾರಿಬೆಳ್ತಂಗಡಿ: ಅರಸಿನಮಕ್ಕಿಯ ಶಿವಾನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ವನದುರ್ಗ ಸಂಜೀವಿನಿ ವಾರ್ಡ್‌ನಲ್ಲಿ ಅ.6ರಂದು ಪೋಷನ್ ಪಖ್ವಾಡ ಕಾರ್ಯಕ್ರಮ ನಡೆಯಿತು.
ವಾರ್ಡ್ ಕಾರ್ಯದರ್ಶಿ ರೇಷ್ಮಾ ಅಧ್ಯಕ್ಷತೆ ವಹಿಸಿದ್ದರು. ವಲಯ ಮೇಲ್ವಿಚಾರಕಿ ವೀಣಾಶ್ರೀ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ, ಹತ್ಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಪಾರ್ವತಿ ಹಾಗೂ ವಾರ್ಡ್ ಕೋಶಾಧಿಕಾರಿ ಸರೋಜ ಉಪಸ್ಥಿತರಿದ್ದರು. ಸಂಜೀವಿನಿ ಧ್ಯೇಯಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.ಪ್ರಾಸ್ತಾವಿಕವಾಗಿ ಮಾತನಾಡಿದ ವಲಯ ಮೇಲ್ವಿಚಾರಕಿ ವೀಣಾಶ್ರೀ, ಹೊರಗಿನ ಆಹಾರ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ, ಮನೆಯಲ್ಲಿ ತಯಾರಿಸಿದ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಎಂದರು.
ಲಿಂಗತ್ವ ಹಾಗೂ ಎಫ್‌ಎನ್‌ಎಚ್‌ಡಬ್ಲ್ಯು–ಎಲ್‌ಸಿಆರ್‌ಪಿ ಕುರಿತು ಮಾಹಿತಿ ನೀಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಮಾತನಾಡಿ, ಪೌಷ್ಟಿಕ ಆಹಾರದ ಮಹತ್ವ ತಿಳಿಸುವ ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿವೆ ಎಂದರು. ವಿವಿಧ ಬಗೆಯ ಪೌಷ್ಟಿಕ ಆಹಾರ ತಯಾರಿಸಿ ತಂದ ಸದಸ್ಯರಿಗೆ ಶುಭ ಹಾರೈಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಆಶಾ ಕಾರ್ಯಕರ್ತೆ ಪಾರ್ವತಿ, ನುಗ್ಗೆ ಸೊಪ್ಪಿನಲ್ಲಿರುವ ಪೋಷಕಾಂಶಗಳು ಹಾಗೂ ದಿನನಿತ್ಯ ಸೇವಿಸುವ ಆಹಾರದ ಕುರಿತು ವಿವರಿಸಿದರು.


ಸಂಜೀವಿನಿ ಸಂಘಗಳ ಸದಸ್ಯರು ನುಗ್ಗೆ ಸೊಪ್ಪಿನ ಪಲ್ಯ, ವಿಟಮಿನ್ ಸೊಪ್ಪಿನ ಪಲ್ಯ, ಹೆಸರುಕಾಳು, ರಾಗಿ ಮಣ್ಣಿ, ಅಕ್ಕಿ ಉಂಡೆ, ರವೆ ಉಂಡೆ, ಕ್ಯಾರೆಟ್ ಹಲ್ವಾ, ಪೇಡಾ, ಪತ್ರೊಡೆ, ಒಂದೆಲಗ ಚಟ್ನಿ, ನೀರು ಹಿಂಡಿ, ಎಳ್ಳು ಜ್ಯೂಸ್, ಮೊಟ್ಟೆ ಭುರ್ಜಿ, ಪಲಾವ್, ಮೆಂತೆ ಮಣ್ಣಿ, ನುಗ್ಗೆ ಸೊಪ್ಪಿನ ಇಡ್ಲಿ ಸೇರಿದಂತೆ ಒಟ್ಟು 40 ಬಗೆಯ ಪೌಷ್ಟಿಕ ಆಹಾರಗಳನ್ನು ಮನೆಯಲ್ಲಿ ತಯಾರಿಸಿ ತಂದಿದ್ದರು.ಎಲ್‌ಸಿಆರ್‌ಪಿ ಹೇಮಲತಾ, ಕೃಷಿ ಸಖಿ ಹರೀನಾಕ್ಷಿ, ಬಿಸಿ ಸಖಿ ರೇವತಿ ಹಾಗೂ ಸಿಆರ್‌ಪಿ–ಇಪಿ ವಿದ್ಯಾ ಉಪಸ್ಥಿತರಿದ್ದರು.
ಎಂಬಿಕೆ ನೀತಾ ಕಾರ್ಯಕ್ರಮ ನಿರೂಪಿಸಿದರು. ಎಲ್‌ಸಿಆರ್‌ಪಿ ಅಮಿತ ಸ್ವಾಗತಿಸಿ, ಪಶುಸಖಿ ವೇದಾವತಿ ವಂದಿಸಿದರು. ಕೊನೆಯಲ್ಲಿ ಸದಸ್ಯರು ತಯಾರಿಸಿ ತಂದ ಆಹಾರಗಳನ್ನು ಸವಿದರು.









