ತುಳು ಭಾಷೆಯ ಲಿಪಿಗೆ ಡಿಜಿಟಲ್ ಸ್ಪರ್ಶ!ಮೊಬೈಲ್‌ನಲ್ಲೇ ತುಳು ಲಿಪಿಯಲ್ಲಿ ಬರೆಯಲು ಹೊಸ ಕೀಬೋರ್ಡ್ | ‘ಕುರಲ್ ತುಳು’ ಆ್ಯಪ್ ಅಭಿವೃದ್ಧಿ

0

ಮಂಗಳೂರು,: ತುಳು ಭಾಷೆಯ ಲಿಪಿಗೆ ಇದೀಗ ಡಿಜಿಟಲ್ ಲೋಕದಲ್ಲೂ ಹೊಸ ವೇದಿಕೆ ದೊರೆತಿದೆ. ಸ್ಮಾರ್ಟ್‌ಫೋನ್‌ನಲ್ಲಿ ತುಳು ಲಿಪಿಯಲ್ಲೇ ಸುಲಭವಾಗಿ ಬರೆಯಲು ಅನುಕೂಲವಾಗುವಂತೆ ‘ಕುರಲ್ ತುಳು’ ಎಂಬ ನೂತನ ಕೀಬೋರ್ಡ್ ಅಭಿವೃದ್ಧಿಪಡಿಸಲಾಗಿದೆ.ಬೆಂಗಳೂರಿನಲ್ಲಿ ನಡೆದ ‘ತುಳುನಾಡ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಈ ಕೀಬೋರ್ಡ್‌ ಅನ್ನು ಬಿಡುಗಡೆ ಮಾಡಲಾಗಿದೆ.

ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ಹರ್ಷಿತ್ ದೇವಾಡಿಗ ಹಾಗೂ ಚೈತ್ರಾ ಪೂಜಾರಿ ಅವರು ಇದನ್ನು ಅಭಿವೃದ್ಧಿಪಡಿಸಿದ್ದಾರೆ.ಇದುವರೆಗೆ ತುಳು ಲಿಪಿಯಲ್ಲಿ ಬರೆಯಲು ಪ್ರತ್ಯೇಕ ವ್ಯವಸ್ಥೆ ಅಥವಾ ತಾಂತ್ರಿಕ ಜ್ಞಾನ ಅಗತ್ಯವಿತ್ತು. ಆದರೆ ಇದೀಗ ಮೊಬೈಲ್ ಕೀಬೋರ್ಡ್‌ನಲ್ಲೇ ಅಕ್ಷರಗಳನ್ನು ಆಯ್ಕೆ ಮಾಡಿಕೊಂಡು ಸುಲಭವಾಗಿ ತುಳು ಲಿಪಿಯಲ್ಲಿ ಬರೆಯಬಹುದಾಗಿದೆ.

ಕೀಬೋರ್ಡ್ ಸೌಲಭ್ಯಕ್ಕೆ ಮಾತ್ರ ಸೀಮಿತವಾಗದೆ, ತುಳು ನಿಘಂಟು, ಮೂಲಭೂತ ವಾಕ್ಯಗಳು, ಆಡಿಯೋ ಆಧಾರಿತ ಕಲಿಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪರಿಚಯಿಸುವ ಉದ್ದೇಶವೂ ಹೊಂದಿದೆ. ತುಳು ಲಿಪಿಯನ್ನು ಪುಸ್ತಕ, ದಾಖಲೆ ಅಥವಾ ಕಲಿಕಾ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸದೆ, ಮೊಬೈಲ್ ಸಂವಹನದ ಭಾಗವಾಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ತುಳು ಭಾಷೆ ಮತ್ತು ಲಿಪಿಯ ಡಿಜಿಟಲ್ ಬಳಕೆಗೆ ಈ ಹೊಸ ಪ್ರಯತ್ನ ಮತ್ತಷ್ಟು ಬಲ ನೀಡುವ ನಿರೀಕ್ಷೆ ಮೂಡಿಸಿದೆ.

LEAVE A REPLY

Please enter your comment!
Please enter your name here