






ಬೆಳ್ತಂಗಡಿ: ೧೪ ವರ್ಷಗಳಿಂದ ನ್ಯಾಯಕ್ಕಾಗಿ ಮೊರೆಯಿಡುತ್ತಿರುವ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದಂತೆ ದಕ್ಷ, ಪ್ರಾಮಾಣಿಕ ಹಾಗೂ ಯೋಗ್ಯ ಅಧಿಕಾರಿಗಳ ಎಸ್.ಐ.ಟಿ ರಚಿಸಿ ತನಿಖೆ ನಡೆಸಬೇಕಾದ ಸರಕಾರ ತಾನು ರಚಿಸಿದ ಎಸ್.ಐ.ಟಿಯಲ್ಲಿ ಕಳಂಕಿತರನ್ನು ಸೇರಿಸಿ ಸೌಜನ್ಯಳಿಗೆ ಮತ್ತೆ ನ್ಯಾಯ ಸಿಗದಂತೆ ಮಾಡಲು ಹುನ್ನಾರ ನಡೆಸಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ದ.ಕ. ಜಿಲ್ಲಾಧ್ಯಕ್ಷೆ ಕಿರಣಪ್ರಭಾ ಆರೋಪಿಸಿದ್ದಾರೆ.
ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಸೌಜನ್ಯ ಪ್ರಕರಣದ ಮರು ತನಿಖೆಗೆ ನೇಮಕವಾದ ಎಸ್.ಐ.ಟಿ.ಯಿಂದ ಕಳಂಕಿತರನ್ನು ಕೈಬಿಡಲು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸೆ.೨೮ರಂದು ನಡೆಸಿದ ಪ್ರತಿಭಟನೆಯನ್ನುzಶಿಸಿ ಮಾತಾಡಿದ ಅವರು ಸೌಜನ್ಯಳಿಗೆ ನ್ಯಾಯ ಸಿಕ್ಕಿಲ್ಲ ಎಂದು ಮನವರಿಕೆ ಮಾಡಿಕೊಂಡ ಸುಪ್ರೀಂಕೋರ್ಟ್ ಮರು ತನಿಖೆಗೆ ಆದೇಶಿಸಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದರು.


ನ್ಯಾಯದ ಬಯಕೆ ಚಿಗುರಿದೆ: ಜೆ.ಎಂ.ಎಸ್ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಾತನಾಡಿ ೨೦೧೨ರಲ್ಲಿ ಸೌಜನ್ಯ ಪ್ರಕರಣ ನಡೆದಾಗಿನಿಂದ ನಿರಂತರ ಹೋರಾಟದ ಕಣದಲ್ಲಿದ್ದ ಜೆಎಂಎಸ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಮತ್ತೆ ನ್ಯಾಯದ ಬಯಕೆ ಚಿಗುರಿದೆ ಎಂದರು. ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವುದರ ಜೊತೆಗೆ ಪದ್ಮಲತ ಮೊದಲಾದ ನೂರಾರು ಅಸಹಜ ಸಾವುಗಳಿಗೆ, ಪತ್ತೆಯಾಗದ ಪ್ರಕರಣಗಳಿಗೆ ನ್ಯಾಯ ಸಿಗುವಂತಾಗಲಿ ಎಂದು ಹೇಳಿದ ಅವರು ಮರು ತನಿಖೆ ಮಾಡಬೇಕಾದ ತನಿಖಾ ತಂಡ ರಚಿಸುವಾಗ ಯೋಗ್ಯರನ್ನು ಆಯ್ಕೆ ಮಾಡಬೇಕೇ ವಿನಃ ಅಪ್ರಮಾಣಿಕೆತೆ, ಹಲವು ಆರೋಪಗಳಿಂದ ಕೂಡಿದ ಅದಿಕಾರಗಳನ್ನು ಆಯ್ಕೆ ಮಾಡಬಾರದು ಎಂದು ಹೇಳಿದರು.
ಮುಖ್ಯಮಂತ್ರಿ ಘೋಷಿಸಲಿ: ರೈತ ನಾಯಕ ಶ್ಯಾಮರಾಜ್ ಮಾತನಾಡಿ ಒಂದೋ ಯೋಗ್ಯ ಪ್ರಮಾಣಿಕ ಅಧಿಕಾರಿಗಳ ಆಯ್ಕೆ ಮಾಡುವ ಮೂಲಕ ಸೌಜನ್ಯಳಿಗೆ ನ್ಯಾಯ ಕೊಡಿಸಲು ಸರಕಾರ ಈ ಅವಕಾಶವನ್ನು ಬಳಸಿಕೊಳ್ಳಲಿ ಅಥವಾ ದಕ್ಷ, ಯೋಗ್ಯ, ಪ್ರಮಾಣಿಕ ಅಧಿಕಾರಿಗಳೇ ನಮ್ಮ ಸರಕಾರದಲ್ಲಿ ಇಲ್ಲ ಎಂದು ಮುಖ್ಯಮಂತ್ರಿಗಳು ಘೋಷಿಸಲಿ ಎಂದು ಹೇಳಿದರು.
ಜನರ ಆಶಯಗಳಂತೆ ನ್ಯಾಯ ಒದಗಿಸಿಕೊಡಲು ಕಠಿಬದ್ಧರಾಗಿರುವವನೇ ನಿಜವಾದ ಆಡಳಿಗಾರ ಎಂದೆನಿಸಲು ಸಾಧ್ಯ ಎಂದು ಅವರು ಹೇಳಿದರು. ಜಯಶ್ರೀ ಸ್ವಾಗತಿಸಿ ಸೌಜನ್ಯ ಹೋರಾಟದ ಕ್ರಾಂತಿಗೀತೆ ಹಾಡಿದರು. ಜೆ.ಎಂಎಸ್ ಮುಖಂಡರಾದ ಯೋಗಿತ, ಪ್ರಮೋದಿನಿ, ಅಸುಂತ, ರೋಹಿಣಿ, ಮಮತ, ಕುಮಾರಿ, ಅಶ್ವಿತ, ಕುಸುಮಾವತಿ, ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಿ.ಎಂ.ಭಟ್, ಕಾರ್ಮಿಕ ಮುಖಂಡರಾದ ಧನಂಜಯ, ಸುಕುಮಾರ್, ರಾಮಚಂದ್ರ, ಅಪ್ಸರಾಲಿಯ ಮೊದಲಾದವರು ಭಾಗವಹಿಸಿದ್ದರು. ಜೆಎಂಎಸ್ ತಾಲೂಕು ಕಾರ್ಯದರ್ಶಿ ವಿನೋದ ಸರಕಾರಕ್ಕೆ ಸಲ್ಲಿಸುವ ಮನವಿ ಪತ್ರ ವಾಚಿಸಿದರು. ಪುಷ್ಪ ವಂದಿಸಿದರು.









