






ಬೆಳ್ತಂಗಡಿ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಿಂಜ ಸಮೀಪದ ಪುಳಿಮಜಲು ನಿವಾಸಿಯಾಗಿದ್ದು ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಸುಹಾಸ್ ಶೆಟ್ಟಿ ಅವರನ್ನು ಮಂಗಳೂರಿನ ಬಜ್ಪೆ ಸಮೀಪದ ಕಿನ್ನಿಪದವಿನಲ್ಲಿ ೨೦೨೫ರ ಮೇ ೧ರಂದು ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿ ಪ್ರತೀಕಾರ ತೀರಿಸಲು ಮುಸ್ಲಿಂ ಯುವಕನ ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣದ ಮಿತ್ತೊಟ್ಟು ನಿವಾಸಿ ಅಭಿಷೇಕ್ ಎಂಬವರು ನೀಡಿದ ದೂರಿನಂತೆ ಉಡುಪಿಯ ಸುದೀಪ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೧೫೫/೨೦೧೬ರಂತೆ ಬಿಎನ್ಎಸ್ ೫೫, ೬೧(೨)(ಎ)ರಡಿ ಸೆ. ೨೩ರಂದು ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಮುಂದಿನ ತನಿಖೆಯನ್ನು ಸಿಸಿಬಿಗೆ ಒಪ್ಪಿಸಿದ್ದಾರೆ.


ಪ್ರಕರಣದ ವಿವರ: ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿರುವ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣದ ಮಿತ್ತೊಟ್ಟು ನಿವಾಸಿ ಧರ್ಮಪ್ಪ ಪೂಜಾರಿ ಎಂಬವರ ಪುತ್ರ ಅಭಿಷೇಕ್(೨೫) ಹಾಗೂ ಉಡುಪಿಯ ಸುದೀಪ್ ಎಂಬವರು ಸುಮಾರು ಒಂದೂವರೆ ವರ್ಷದಿಂದ ಪರಿಚಿತರಾಗಿದ್ದಾರೆ. ಹತ್ಯೆಯಾಗಿರುವ ಸುಹಾಸ್ ಶೆಟ್ಟಿ ಇಬ್ಬರಿಗೂ ಪರಿಚಿತರಾಗಿದ್ದರು. ಸುಹಾಸ್ ಶೆಟ್ಟಿ ಅವರ ಹತ್ಯೆಯ ಬಳಿಕ ಅಭಿಷೇಕ್ ಮತ್ತು ಸುದೀಪ್ ಅವರು ಪ್ರತಿಕಾರದ ಬಗ್ಗೆ ಮಾತನಾಡಿಕೊಂಡಿದ್ದರು. ಸಮಯ ಬಂದಾಗ ಕೊಲೆಗೆ ಸ್ಕೆಚ್ ರೂಪಿಸಿದ್ದರು. ೪ ತಿಂಗಳ ಹಿಂದೆ ಅಭಿಷೇಕ್ನನ್ನು ಪ್ರತಿಕಾರದ ಬಗ್ಗೆ ಮಾತನಾಡಲು ಸುದೀಪ್ ಉಡುಪಿಗೆ ಕರೆಸಿಕೊಂಡಿದ್ದ. ಅದರಂತೆ ಸ್ನೇಹಿತ ಕೀರ್ತನ್ ಎಂಬವರ ಜತೆ ಅಭಿಷೇಕ್ ಉಡುಪಿಗೆ ಹೋಗಿದ್ದರು. ಅಲ್ಲಿ ಸುದೀಪ್ ತ್ರಿವೇಣಿ ಹೊಟೇಲ್ನಲ್ಲಿ ಮಹೇಶ್ ಎಂಬಾತನನ್ನು ಪರಿಚಯಿಸಿದ್ದಾನೆ. ಕೆಲವು ದಿನಗಳ ಬಳಿಕ ಸುದೀಪ್ ಕರೆ ಮಾಡಿ ಕಾರ್ಕಳಕ್ಕೆ ಬರಲು ಹೇಳಿದ್ದಾನೆ. ಕಾರ್ಕಳದ ಅತ್ತೂರು ಚರ್ಚ್ ಬಳಿ ಭೆಟಿಯಾದಾಗ ಈ ಡೀಲ್ ಮಾಡಿದರೆ ೨೪ ಲಕ್ಷ ರೂ. ನೀಡುತ್ತೇನೆ. ಜತೆಗೆ ಜೈಲಿನಲ್ಲಿರುವಾಗ ತಿಂಗಳಿಗೆ ೫ ಸಾವಿರ ರೂ. ದಿನಸಿ ಮನೆಗೆ ತಲುಪಿಸುತ್ತೇನೆ ಮತ್ತು ಮನೆ ಖರ್ಚಿಗೆ ೧೫ ಸಾವಿರ ರೂ. ನೀಡುತ್ತೇನೆ ಎಂದಿದ್ದ. ಆಗ ಇನ್ನೊಬ್ಬ ವ್ಯಕ್ತಿಯೂ ಸುದೀಪ್ ಜತೆಗಿದ್ದ. ಕೆಲವು ದಿನಗಳ ಬಳಿಕ ಸುದೀಪ್ ಅಭಿಷೇಕ್ನ ಮೊಬೈಲ್ ಫೋನ್ಗೆ ಬಜಪೆ ಕಿನ್ನಿಪದವಿನ ವ್ಯಕ್ತಿಯ ಫೋಟೋ ಕಳುಹಿಸಿ ಆತನ ಚಲನವಲನದ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದ್ದಾನೆ. ಫೋಟೋದಲ್ಲಿರುವಾತ ಹಿಂದೂ ಸಂಘಟನೆಯವರನ್ನು ಕೊಲೆ ಮಾಡಿದ ಮಾಡಿದ ವ್ಯಕ್ತಿ ಎಂದು ಸುದೀಪ್ ತಿಳಿಸಿದ್ದಾನೆ. ಅಭಿಷೇಕ್ ಮತ್ತು ಕೀರ್ತನ್ ಸೇರಿ ಆತನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಸ್ಕಾರ್ಪಿಯೋ ಕಾರಿನ ಡೀಸೆಲ್ಗೆ ಸುದೀಪ್ ೨ ಸಾವಿರ ರೂ. ಹಣವನ್ನೂ ಕಳುಹಿಸಿದ್ದ. ಅಭಿಷೇಕ್ ತನ್ನ ಹಳೆ ಸ್ನೇಹಿತನಾಗಿರುವ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಚಿಂತನ್ ಗುಂಡ್ಯ ಎಂಬಾತನ ಸಂಪರ್ಕದಲ್ಲಿದ್ದು ಆತ ಹಣ ನೀಡಿದಲ್ಲಿ ತಾನೂ ಸಿದ್ದನಿರುವುದಾಗಿ ಆತ ತಿಳಿಸಿದ್ದಾನೆ. ಆದರಂತೆ ಅಭಿಷೇಕ್ ತನ್ನ ಮನೆಯಲ್ಲಿದ್ದ ೨ ತಲವಾರುಗಳನ್ನು ಸಿದ್ಧಪಡಿಸಿಕೊಂಡಿದ್ದ. ಸುದೀಪ್ ಕೂಡಾ ಕೃತ್ಯವನ್ನು ಬೇಗ ಪೂರ್ಣಗೊಳಿಸಲು ಒತ್ತಾಯಿಸಿದ್ದ. ಈ ನಡುವೆ ಅಭಿಷೇಕ್ ಪತ್ನಿಗೆ ಹೆರಿಗೆಯಾಗಿದ್ದು ಇದರಿಂದ ಮನಪರಿವರ್ತನೆಗೊಂಡ ಆತ ತನ್ನ ಮೇಲೆ ಕೇಸು ಆಗಬಹುದು ಎಂಬ ಭಯದಿಂದ ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಇದನ್ನು ಕೀರ್ತನ್ ಹಾಗೂ ಚಿಂತನ್ಗೂ ತಿಳಿಸಿದ್ದಾರೆ. ಸುದೀಪ್ ಮತ್ತು ಮಹೇಶ್ ಕ್ರಿಮಿನಲ್ ಹಿನ್ನೆಲೆಯವರಾದ ಕಾರಣ ತಡವಾಗಿ ಈ ಬಗ್ಗೆ ದೂರು ನೀಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಸಿಬಿಗೆ ಹಸ್ತಾಂತರಿಸಿದ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ: ಸುಹಾಸ್ ಶೆಟ್ಟಿ ಅವರ ಹತ್ಯೆಗೆ ಪ್ರತೀಕಾರ ತೀರಿಸಲು ಸಂಚು ರೂಪಿಸಿರುವ ಕುರಿತು ಅಭಿಷೇಕ್ ಅವರು ನೀಡಿದ ದೂರಿನಂತೆ ಮಂಗಳೂರು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಪ್ರಕರಣದ ತನಿಖೆಯನ್ನು ಸಿಸಿಬಿಗೆ ಒಪ್ಪಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸುಧೀರ್ ಕುಮಾರ್ ರೆಡ್ಡಿ ಅವರು ಪ್ರಾಥಮಿಕವಾಗಿ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬಳಿಕ ತನಿಖೆ ನಡೆಸಿ ಪ್ರಕರಣದ ವಾಸ್ತವಾಂಶಗಳನ್ನು ಪತ್ತೆ ಹಚ್ಚುವುದು ಹಾಗೂ ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಸಂಗ್ರಹಿಸುವುದು ತನಿಖಾಧಿಕಾರಿಗಳ ಕರ್ತವ್ಯ. ಸಿಸಿಬಿ ತಂಡ ತನಿಖೆ ನಡೆಸುತ್ತಿದ್ದು ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ. ಸುಹಾಸ್ ಶೆಟ್ಟಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸರು ೮ ಮಂದಿಯನ್ನು ಬಂಧಿಸಿದ್ದರು. ಬಳಿಕ ಬಂಧಿತರ ಸಂಖ್ಯೆ ೧೧ಕ್ಕೆ ಏರಿಕೆಯಾಗಿತ್ತು. ೨೦೨೫ರ ಜೂನ್ನಲ್ಲಿ ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿದೆ. ಎನ್ಐಎ ಅಧಿಕಾರಿಗಳು ೨೦೨೫ರ ಅಕ್ಟೋಬರ್ ೨೯ರಂದು ಬಂಧಿತ ಹನ್ನೊಂದು ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.









