






ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿ ವಿದ್ಯಾರ್ಥಿನಿ ಸೌಜನ್ಯ ಅವರ ಅತ್ಯಾಚಾರ ಮತ್ತು ಹತ್ಯೆ ನಡೆದು ಅ.೧೦ಕ್ಕೆ ೧೪ ವರ್ಷಗಳು ತುಂಬಲಿದೆ. ಇದೀಗ ಸುಪ್ರೀಂಕೋರ್ಟ್ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ. ಹಾಗಾಗಿ ಇನ್ನಾದರೂ ಸೌಜನ್ಯಾಳಿಗೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ಇದೆ. ಪ್ರಕರಣ ನಡೆದ ದಿನವಾದ ಅ.೧೦ರಂದು ನ್ಯಾಯದ ನಡಿಗೆ ಮೂಲಕ ಕಾಲ್ನಡಿಗೆ ಜಾಥಾ ಹಾಗೂ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಅಂದು ಬೆಳಗ್ಗೆ ೧೦ ಗಂಟೆಗೆ ಉಜಿರೆಯ ಕುಂಜರ್ಪದಿಂದ ಪ್ರಾರಂಭವಾಗಲಿರುವ ಕಾಲ್ನಡಿಗೆ ಜಾಥಾ ೫ ಕಿ.ಮೀ. ಸಾಗಿ ಬೆಳ್ತಂಗಡಿವರೆಗೆ ನಡೆಯಲಿದೆ. ಬಳಿಕ ನಡೆಯುವ ಅಭಿನಂದನಾ ಸಮಾವೇಶದಲ್ಲಿ ಸೌಜನ್ಯ ಪ್ರಕರಣದಲ್ಲಿ ಹೋರಾಟಕ್ಕೆ ಬೆಂಬಲಿಸಿದ ವಕೀಲರು ಹಾಗೂ ಹೋರಾಟಗಾರರನ್ನು ಅಭಿನಂದಿಸಲಾಗುವುದು ಎಂದು ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ತಿಳಿಸಿದ್ದಾರೆ. ತಿಮರೋಡಿ ನಿವಾಸದಲ್ಲಿ ಸೆ.೨೯ರಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ದೊಡ್ಡ ಜಯ: ಸೌಜನ್ಯಾಳಿಗೆ ನ್ಯಾಯ ದೊರಕಿಸಿಕೊಡಲು ಕಳೆದ ೧೪ ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿzವೆ. ನಮ್ಮ ವಕೀಲರ ಪರಿಶ್ರಮದಿಂದಾಗಿ ಸುಪ್ರೀಂಕೋರ್ಟ್ನಿಂದ ಮರು ತನಿಖೆಯ ಆದೇಶ ಹೊರ ಬಿದ್ದಿದೆ. ಇದು ಸೌಜನ್ಯ ಪ್ರಕರಣದಲ್ಲಿ ಸಿಕ್ಕ ದೊಡ್ಡ ಜಯ. ಇದರಿಂದಾಗಿ ನ್ಯಾಯದ ಭರವಸೆ ಮೂಡಿದೆ. ನ್ಯಾಯದ ನಡಿಗೆ ಮೂಲಕ ಅಭಿನಂದನಾ ಸಮಾರಂಭ ಆಯೋಜಿಸಿ ವಕೀಲರನ್ನು ಹಾಗೂ ಹೋರಾಟಗಾರರನ್ನು ಅಭಿನಂದಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಸುಪ್ರೀಂಕೋರ್ಟ್, ಹೈಕೋರ್ಟ್ನಲ್ಲಿ ವಾದಿಸಿದ ವಕೀಲರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಕರಣದಲ್ಲಾದ ಬೆಳವಣಿಗೆಗಳ ಕುರಿತು ಸಾರ್ವಜನಿಕರ ಮುಂದೆ ಬಿಚ್ಚಿಡಲಿದ್ದಾರೆ ಎಂದು ಮಹೇಶ್ ಶೆಟ್ಟಿ ತಿಳಿಸಿದರು.
ಕಾನ್ಸ್ಟೇಬಲ್ ಬೇಕಾದರೂ ತನಿಖೆ ನಡೆಸಲಿ: ಪ್ರಕರಣದಲ್ಲಿ ಈ ಹಿಂದೆ ತನಿಖೆ ಮಾಡಿದ ಅಧಿಕಾರಿಗಳನ್ನು ಪಕ್ಕಕ್ಕಿಟ್ಟು ಮರು ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವುದು ಸ್ವಾಗತಾರ್ಹ. ತನಿಖೆಯನ್ನು ಯಾರೇ ಮಾಡಲಿ. ನ್ಯಾಯಯುತವಾಗಿ ಮಾಡಲಿ ಅನ್ನುವುದೇ ನಮ್ಮ ಆಶಯ. ಪೊಲೀಸ್ ಕಾನ್ಸ್ಟೇಬಲ್ ನೇತೃತ್ವದ ತಂಡ ಬೇಕಾದರೂ ತನಿಖೆ ಮಾಡಲಿ. ನಮಗೆ ಈ ಬಗ್ಗೆ ತಲೆನೋವಿಲ್ಲ. ನಮ್ಮ ವಕೀಲರ ತಂಡ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಪ್ರಕರಣದ ತನಿಖೆ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಯಾವ ರೀತಿ ತನಿಖೆಯಾಗುತ್ತದೆ, `ಎಲ್ಲಿ ತಪ್ಪಾಗಿದೆ’ ಎಂಬ ನ್ಯಾನ್ಯತೆಗಳನ್ನು ಕಂಡು ಬಂದ ತಕ್ಷಣ ಅದನ್ನು ಸುಪ್ರೀಂಕೋರ್ಟ್ಗೆ ತಿಳಿಸಿ ನ್ಯಾಯ ಒದಗಿಸಿಕೊಡಲಿದ್ದಾರೆ. ಒಟ್ಟಾರೆಯಾಗಿ ಸೌಜನ್ಯಾಳಿಗೆ ನ್ಯಾಯ ಸಿಗಬೇಕು, ಅತ್ಯಾಚಾರಿ ಯಾರೆಂದು ಗೊತ್ತಾಗಬೇಕು ಎಂದು ಹೇಳಿದ ಮಹೇಶ್ ಶೆಟ್ಟಿ ಅವರು, ಮುಖ್ಯಮಂತ್ರಿಯವರೇ ತನಿಖೆಗೆ ಉತ್ತರದಾಯಿತ್ವ ಹೊಂದಿದ್ದಾರೆ. ಅವರು ನ್ಯಾಯಯುತವಾಗಿ ತನಿಖೆ ನಡೆಸುವಂತೆ ನೋಡಿಕೊಳ್ಳಬೇಕು. ಪ್ರಕರಣ ಸಂಬಂಧ ತನಿಖೆ ನಡೆಸಿದ ಸಿಬಿಐ ಕೋರ್ಟ್ ಸಂತೋಷ್ ರಾವ್ ನಿರಾಪರಾಧಿ ಎಂದು ಎರಡೆರಡು ಬಾರಿ ಹೇಳಿದೆ. ಹೈಕೋರ್ಟ್ ಕೂಡ ಹೇಳಿದೆ. ಇದೀಗ ಸುಪ್ರೀಂಕೋರ್ಟ್ ಸಂತೋಷ್ ರಾವ್ ಮತ್ತು ತನಿಖೆಯಲ್ಲಿ ತಪ್ಪು ಮಾಡಿದಂತಹ ಪೊಲೀಸರು, ಸಿಐಡಿ, ಸಿಬಿಐ ಅಧಿಕಾರಗಳನ್ನು ಬದಿಗಿಟ್ಟು, ಕರ್ನಾಟಕದ ಸರ್ಕಾರಕ್ಕೆ ಚಾಟಿ ಬೀಸಿ ಹೊಸ ಎಸ್ಐಟಿ ರಚಿಸಿ ತನಿಖೆ ನಡೆಸಲು ಆದೇಶಿಸಿದೆ. ಈ ಕೃತ್ಯವನ್ನು ಸಂತೋಷ್ ರಾವ್ ಎಸಗಿಲ್ಲವೆಂದಾದರೆ ಇನ್ಯಾರು ಈ ಕೃತ್ಯ ಎಸಗಿರುವುದು ಎಂಬುದನ್ನು ಎಸ್ಐಟಿ ತನಿಖೆ ನಡೆಸಿ ಸೌಜನ್ಯಾಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದರು. ರಾಜ್ಯ, ಹೊರರಾಜ್ಯಗಳ ಮುಖ್ಯಮಂತ್ರಿಗಳು ಬಂದು ಪ್ರಮಾಣ ಮಾಡಿದಂತ ಸ್ಥಳ ಧರ್ಮಸ್ಥಳ. ಸತ್ಯದೇವತೆ, ನ್ಯಾಯ ದೇವತೆ, ಧರ್ಮದೇವತೆ, ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ನೆಲೆಯಾಗಿರುವ ಜಾಗದಲ್ಲಿ ಸತ್ಯಕ್ಕೆ, ನ್ಯಾಯಕ್ಕೆ ಬೆಲೆ ಸಿಗುತ್ತಿದ್ದ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅತ್ಯಾಚಾರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ತನಿಖೆಗೆ ಬಂದಿದೆ ಎಂದರೆ ಸನಾತನ ಹಿಂದೂ ಧರ್ಮದ ದುರದೃಷ್ಟ ಎಂದು ತಿಮರೋಡಿ ಇದೇ ವೇಳೆ ಹೇಳಿದರು.
ಸುಪ್ರೀಂಕೋರ್ಟ್ ಪ್ರಶ್ನಿಸಿದೆ- ಮಟ್ಟಣ್ಣನವರ್: ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್ ಮಾತನಾಡಿ, ಪ್ರಕರಣ ಸಂಬಂಧ ಮೊದಲ ಹಂತದಲ್ಲಿ ಸ್ಥಳೀಯ ಪೊಲೀಸರು, ಸಿಐಡಿ, ಸಿಬಿಐ, ಎರಡನೇ ಹಂತದಲ್ಲಿ ಸಿಬಿಐ, ಮೂರನೇ ಹಂತದಲ್ಲಿ ಸಿಬಿಐ ತನಿಖೆ ನಡೆಸಿದರೂ ಸೌಜನ್ಯಾಳಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗಿಲ್ಲ. ಇನ್ನು ನ್ಯಾಯ ಸಿಗುವುದಿಲ್ಲ. ಸೌಜನ್ಯ ಪ್ರಕರಣ ಮುಗಿದ ಅಧ್ಯಾಯ ಎಂದು ಅನೇಕರು ಹೇಳುತ್ತಿದ್ದರು. ಇಂತಹ ಸಂದರ್ಭದಲ್ಲಿ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ತನಿಖೆಯನ್ನೇ ತಿರಸ್ಕಾರ ಮಾಡಿ ರಾಜ್ಯ ಸರ್ಕಾರ ಎಸ್ಐಟಿ ರಚಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ನೀವು ಯಾರ ರPಣೆಗಾಗಿ ತನಿಖೆ ನಡೆಸುತ್ತಿದ್ದೀರಿ ಎಂದು ಸಿಬಿಐ ಅಧಿಕಾರಿಗಳನ್ನೇ ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಇದರಿಂದ ಇಲ್ಲಿ ಯಾರನ್ನೋ ರಕ್ಷಣೆ ಮಾಡಲು ತನಿಖೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದರು.
ನಿಷ್ಪಕ್ಷ ಪಾತವಾಗಿ ತನಿಖೆ ನಡೆಸಬೇಕು: ಸದ್ಯ ರಚನೆಯಾಗಿರುವ ಎಸ್ಐಟಿ ಯಾವುದೇ ಪ್ರಭಾವಕ್ಕೊಳಗಾಗದೆ, ಆಮಿಷಕ್ಕೊಳಗಾಗದೆ, ಸಾಕ್ಷಿಗಳಿಗೆ ಬೆದರಿಕೆಯೊಡ್ಡದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಈ ರೀತಿ ಮಾಡಿದರೆ ಅಂತಹ ಅಧಿಕಾರಿಗಳು ಅಮಾನತಾಗುವುದು ಖಂಡಿತ ಎಂದು ಎಚ್ಚರಿಸಿದ ಮಟ್ಟಣ್ಣನವರ್ ಅವರು ನಾವು ಸಾಕ್ಷಿಗಳನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿzವೆ ಎಂದರು.
ಎಸ್ಐಟಿ ವರದಿ ಎಲ್ಲಿದೆ?: ಕಳೆದ ವರ್ಷ ನಮ್ಮನ್ನೆಲ್ಲರನ್ನು ತನಿಖೆಗೆ ಒಳಪಡಿಸಲಾಗಿತ್ತು. ಇದರ ವರದಿ ಎಲ್ಲಿದೆ? ಈ ಬಗ್ಗೆ ವಿಪP ನಾಯಕ ಆರ್. ಅಶೋಕ್, ಗೋವಿಂದ ಎಂ. ಕಾರಜೋಳ ಸೇರಿದಂತೆ ಅನೇಕರು ಪ್ರಶ್ನಿಸಿದ್ದಾರೆ. ನಾವು ಕೂಡ ಕೇಳುತ್ತಿzವೆ ಎಂದು ಹೇಳಿದ ಗಿರೀಶ್ ಮಟ್ಟಣ್ಣನವರ್ ಅವರು ಎಸ್ಐಟಿ ವರದಿಯಲ್ಲಿ ಉಲ್ಲೇಖಿಸಲಾದ ಯುಡಿಆರ್ ಪ್ರಕರಣಗಳು, ಬಂಗ್ಲೆ ಗುಡ್ಡದಲ್ಲಿ ಲಭ್ಯವಾದ ೭ ಅಸ್ಥಿಪಂಜರಗಳ ಸೂಕ್ಷ್ಮ ಮತ್ತು ಪ್ರಮುಖ ಅಂಶಗಳು ಬೆಳಕಿಗೆ ಬಂದಿರುತ್ತದೆ. ಮುಖ್ಯವಾಗಿ ಯುಡಿಆರ್ ಪ್ರಕರಣಗಳ ವ್ಯತ್ಯಾಸವಿದೆ. ೧೯೯೮-೨೦೧೪ರ ಅವಧಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆಗಳಲ್ಲಿ ೧೪೮೦ ಯುಡಿಆರ್ ಪ್ರಕರಣಗಳು ದಾಖಲಾಗಿದ್ದರೆ ಎಸ್ಸಿಆರ್ಬಿ ಹಾಗೂ ಗ್ರಾಮ ಪಂಚಾಯತ್ ದಾಖಲೆಗಳಲ್ಲಿ ೧೫೧೦ ಪ್ರಕರಣಗಳು ಕಂಡು ಬಂದಿದೆ.
ಒಟ್ಟು ೩೦ ಪ್ರಕರಣಗಳ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಪತ್ತೆಯಾಗಿರುವ ೭ ಅಸ್ಥಿಪಂಜರಗಳ ಡಿಎನ್ಎ ಪರೀಕ್ಷೆ, ವಿಧಿವಿಜ್ಞಾನ ಪರೀಕ್ಷೆ ಹಾಗೂ ನಾಪತ್ತೆಯಾದ ವ್ಯಕ್ತಿಗಳ ವಿವರಗಳೊಂದಿಗೆ ತಾಳೆ ಮಾಡಿ ಮರಣದ ನಿಖರ ಕಾರಣಗಳನ್ನು ಪತ್ತೆ ಹಚ್ಚುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಬಗ್ಗೆ ಮಟ್ಟಣ್ಣವರ್ ಉಲ್ಲೇಖಿಸಿದರು. ಜನವರಿಯಲ್ಲೇ ಸರ್ಕಾರಕ್ಕೆ ಎಸ್ಐಟಿ ವರದಿ ಸಲ್ಲಿಕೆಯಾಗಿದೆ. ಪತ್ತೆಯಾದ ೭ ಮಾನವನ ಅವಶೇಷಗಳು ಕ್ರೂರತೆಗೆ ಒಳಗಾಗಿ ಕೊಲೆಯಾಗಿದ್ದವರದ್ದು ಎಂದು ಎಫ್ಎಸ್ಎಲ್ ವರದಿ ಆಧಾರದಲ್ಲಿ ಎಸ್ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಸರ್ಕಾರ ಇದನ್ನೆಲ್ಲ ಯಾಕೆ ಮುಚ್ಚಿಡುತ್ತಿದೆ ಎಂದು ಗಿರೀಶ್ ಮಟ್ಟಣ್ಣನವರ್ ಪ್ರಶ್ನಿಸಿದರು. ಸೌಜನ್ಯ ತಾಯಿ ಕುಸುಮಾವತಿ ಚಂದಪ್ಪ ಗೌಡ ಮಾತನಾಡಿ ಒಳ್ಳೆಯ ರೀತಿಯಲ್ಲಿ ತನಿಖೆಯಾಗಬೇಕು ಎಂದು ಹೇಳಿದರು. ಅನಿಲ್ ಅಂತರ ಸ್ವಾಗತಿಸಿ ವಂದಿಸಿದರು.


ಶಶಿಕುಮಾರ್ ವಿರುದ್ಧವೇ ಎಸ್ಐಟಿ ರಚಿಸಬೇಕು: ಎಸ್ಐಟಿಯಲ್ಲಿ ಎನ್. ಶಶಿಕುಮಾರ್ ಇರುವ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಗಿರೀಶ್ ಮಟ್ಟಣ್ಣವರ್ ಅವರು ಶಶಿಕುಮಾರ್ ಅವರ ಬಗ್ಗೆ ವೈಯಕ್ತಿವಾಗಿ ನಮಗೆ ಯಾವುದೇ ದ್ವೇಷವಿಲ್ಲ. ಆದರೆ ಇವರ ಬಗ್ಗೆ ಸಾರ್ವಜನಿಕವಾಗಿ ಅನೇಕ ಆರೋಪಗಳು ಕೇಳಿ ಬರುತ್ತಿವೆ. ಅವರ ಮೇಲಿನ ಆರೋಪಗಳನ್ನು ತನಿಖೆ ಮಾಡಲೇ ಒಂದು ಎಸ್ಐಟಿ ರಚಿಸಬೇಕಾಗಿದೆ. ಅಷ್ಟು ಆರೋಪಗಳು ಬರುತ್ತಿವೆ. ಹೀಗಾಗಿ ಇಂತಹ ಅಧಿಕಾರಿಯಿಂದ ನ್ಯಾಯ ಸಿಗಬಹುದೇ ಎಂಬ ಪ್ರಶ್ನೆ ಎದ್ದಿದೆ ಎಂದು ಹೇಳಿದರು.









