ವಿಶ್ವ ಹೃದಯದ ದಿನವೇ ವಿಮಾನದಲ್ಲಿ ತುರ್ತು ಚಿಕಿತ್ಸೆ ನೀಡಿ ಪ್ರಯಾಣಿಕನ ಜೀವ ರಕ್ಷಿಸಿದ ಪ್ರಸನ್ನ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕುಮಾರ್ ಕತ್ರಿಬೈಲ್

0

ಮಂಗಳೂರು: ವಿಶ್ವ ಹೃದಯ ದಿನವಾದ ಸೆಪ್ಟೆಂಬರ್ 30ರಂದು ವಿಮಾನ ಪ್ರಯಾಣದ ವೇಳೆ ಸಹಪ್ರಯಾಣಿಕರೊಬ್ಬರಿಗೆ ಏಕಾಏಕಿ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ಅಗತ್ಯ ವೈದ್ಯಕೀಯ ನೆರವು ನೀಡುವ ಮೂಲಕ ಬೆಳ್ತಂಗಡಿಯ ಪ್ರಸನ್ನ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ಈಶ್ವರಮಂಗಲದ ಖ್ಯಾತ ವೈದ್ಯ ಡಾ. ಶ್ರೀಕುಮಾರ್ ಕತ್ರಿಬೈಲ್, BAMS., MD. ಅವರು ಗಮನ ಸೆಳೆದಿದ್ದಾರೆ.

ಉತ್ತರ ಭಾರತದ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಡಾ. ಶ್ರೀಕುಮಾರ್ ಅವರು ಲಕ್ನೋದಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿದ್ದರು. ಬೆಳಗ್ಗೆ ಸುಮಾರು 9.30ರ ವೇಳೆಗೆ ಸುಮಾರು 40 ವರ್ಷದ ಪ್ರಯಾಣಿಕ, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಎಂದು ತಿಳಿದುಬಂದಿರುವ ಮಾಂಗೇಶ್ ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಅವರು ಅಸ್ವಸ್ಥಗೊಂಡಿದ್ದರು. ಅವರೊಂದಿಗೆ ಪತ್ನಿ ಹಾಗೂ ಸುಮಾರು ಎರಡು ವರ್ಷದ ಮಗು ಕೂಡ ಇದ್ದರು.

ಪ್ರಯಾಣಿಕನ ಅಸ್ವಸ್ಥತೆಯನ್ನು ಗಮನಿಸಿದ ವಿಮಾನ ಸಿಬ್ಬಂದಿ, ವಿಮಾನದಲ್ಲಿರುವ ವೈದ್ಯರು ನೆರವಿಗೆ ಬರುವಂತೆ ಮನವಿ ಮಾಡಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸುಮಾರು 40 ವರ್ಷಗಳ ವೈದ್ಯಕೀಯ ಅನುಭವ ಹೊಂದಿರುವ ಡಾ. ಶ್ರೀಕುಮಾರ್ ಅವರು ಪ್ರಯಾಣಿಕನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ವಿಮಾನದಲ್ಲಿದ್ದ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳ ನೆರವಿನಿಂದ ಅಗತ್ಯ ತುರ್ತು ವೈದ್ಯಕೀಯ ಕ್ರಮಗಳನ್ನು ಕೈಗೊಂಡರು.

ಡಾ. ಶ್ರೀಕುಮಾರ್ ಅವರ ಸಮಯೋಚಿತ ಸ್ಪಂದನೆ ಹಾಗೂ ವೈದ್ಯಕೀಯ ನೆರವಿನಿಂದ ಪ್ರಯಾಣಿಕನ ಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಯಿತು ಎಂದು ತಿಳಿದುಬಂದಿದೆ.

ತುರ್ತು ಸಂದರ್ಭದಲ್ಲಿ ಸ್ಪಂದಿಸಿದ ವೈದ್ಯರ ಸೇವೆಗೆ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು.ಘಟನೆಯ ಬಳಿಕ ವಿಮಾನದಲ್ಲಿದ್ದ ಸುಮಾರು 250 ಮಂದಿ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಡಾ. ಶ್ರೀಕುಮಾರ್ ಅವರನ್ನು ಅಭಿನಂದಿಸಿದ ಕ್ಷಣ ಗಮನಾರ್ಹವಾಗಿತ್ತು.ವಿಶ್ವ ಹೃದಯ ದಿನದಂದೇ ನಡೆದ ಈ ಘಟನೆ, ವಿಮಾನ ಪ್ರಯಾಣದಂತಹ ತುರ್ತು ಸಂದರ್ಭಗಳಲ್ಲಿ ವೈದ್ಯರ ಸಮಯೋಚಿತ ಸ್ಪಂದನೆ ಮತ್ತು ವೈದ್ಯಕೀಯ ಪರಿಣತಿಯ ಮಹತ್ವವನ್ನು ಎತ್ತಿ ತೋರಿಸಿದೆ.

LEAVE A REPLY

Please enter your comment!
Please enter your name here