ಕಟ್ಟಡ ಕಾರ್ಮಿಕರ ಸಮಸ್ಯೆಗಳ ಕುರಿತು ಮಂಡಳಿಯೊಂದಿಗೆ ಸಭೆ; ಕಳಪೆ ಕಿಟ್ ವಿತರಣೆ ವಿರೋಧಿಸಿ BMS ಆಕ್ಷೇಪ

0

ಮಂಗಳೂರು, ಸೆ.24:ಇಂದು ಮಂಗಳೂರು ಕಾರ್ಮಿಕ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು ಇದರ ಉಪ ಕಾರ್ಯದರ್ಶಿ ಗುರುಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಮಂಡಳಿಯ ವಿವಿಧ ಕಾರ್ಯಕ್ರಮಗಳು ಹಾಗೂ ಕಟ್ಟಡ ಕಾರ್ಮಿಕರ ಸಮಸ್ಯೆಗಳ ಕುರಿತು ಸಭೆ ನಡೆಯಿತು. ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ಕಲ್ಮಂಜ ತಿಳಿಸಿದ್ದಾರೆ.

ಸಭೆಯಲ್ಲಿ ಕಟ್ಟಡ ಕಾರ್ಮಿಕರಿಗೆ ವಿತರಿಸಲಾಗುತ್ತಿರುವ ಟೂಲ್ ಕಿಟ್ ಮತ್ತು ಸುರಕ್ಷಾ ಕಿಟ್‌ಗಳ ಕಳಪೆ ಗುಣಮಟ್ಟ, ಕಾರ್ಮಿಕರಿಗೆ ನಿರೀಕ್ಷಿತ ಪ್ರಯೋಜನ ನೀಡದ ಆರೋಗ್ಯ ತಪಾಸಣೆ, ಸಂಚಾರಿ ಕ್ಲಿನಿಕ್ ಹಾಗೂ RPL ತರಬೇತಿ ಮುಂತಾದ ಕಾರ್ಯಕ್ರಮಗಳ ಕುರಿತು BMS ವತಿಯಿಂದ ಆಕ್ಷೇಪ ವ್ಯಕ್ತಪಡಿಸಲಾಯಿತು ಎಂದು ಅವರು ತಿಳಿಸಿದ್ದಾರೆ.ಕಾರ್ಮಿಕರ ಹೆಸರಿನಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳ ಬದಲಾಗಿ, ಕಾರ್ಮಿಕರಿಗೆ ನೇರವಾಗಿ ಪ್ರಯೋಜನವಾಗುವಂತೆ ನೇರ ನಗದು ಪಾವತಿ (DBT) ಮೂಲಕ ಹಣವನ್ನು ನೀಡಬೇಕು ಎಂದು ಸಭೆಯಲ್ಲಿ BMS ವತಿಯಿಂದ ಮನವಿ ಮಾಡಲಾಗಿದೆ.

ಅಲ್ಲದೆ ಕಟ್ಟಡ ಕಾರ್ಮಿಕರ ವೃದ್ಧಾಪ್ಯ ವೇತನವನ್ನು ಹೆಚ್ಚಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಇರುವ ಕಾಲಮಿತಿಯನ್ನು ತೆಗೆದುಹಾಕಬೇಕು ಎಂಬ ಬೇಡಿಕೆಯನ್ನೂ ಮಂಡಿಸಲಾಗಿದೆ ಎಂದು ಕುಮಾರನಾಥ ಶೆಟ್ಟಿ ತಿಳಿಸಿದ್ದಾರೆ.

ರಿಜೆಕ್ಟ್ ಕಾರ್ಡ್‌ಗಳ ಮರು ಅರ್ಜಿ ಅವಧಿ 90ರಿಂದ 45 ದಿನಕ್ಕೆ ಇಳಿಕೆಈ ಹಿಂದೆ ಬೆಂಗಳೂರಿನ ಕಾರ್ಮಿಕ ಭವನದಲ್ಲಿ ನಡೆದ BMS ಸಭೆಯಲ್ಲಿ ಮಂಡಿಸಿದ್ದ ಬೇಡಿಕೆಗೆ ಸ್ಪಂದಿಸಿರುವ ಮಂಡಳಿಯು, ರಿಜೆಕ್ಟ್ ಆಗಿರುವ ಕಾರ್ಮಿಕರ ಕಾರ್ಡ್‌ಗಳಿಗೆ ಉಚಿತವಾಗಿ ಮರು ಅರ್ಜಿ ಸಲ್ಲಿಸುವ ಅವಧಿಯನ್ನು 90 ದಿನಗಳಿಂದ 45 ದಿನಗಳಿಗೆ ಇಳಿಸಿರುವುದಾಗಿ ಇಂದಿನ ಸಭೆಯಲ್ಲಿ ತಿಳಿಸಿದೆ ಎಂದು ಅವರು ಹೇಳಿದ್ದಾರೆ.“ರಿಜೆಕ್ಟ್ ಕಾರ್ಡ್‌ಗಳಿಗೆ ಮರು ಅರ್ಜಿ ಸಲ್ಲಿಸುವ ಅವಧಿಯನ್ನು 90 ದಿನಗಳಿಂದ 45 ದಿನಗಳಿಗೆ ಇಳಿಸಿರುವುದು BMS ಹೋರಾಟಕ್ಕೆ ಸಿಕ್ಕ ಮಹತ್ವದ ಸ್ಪಂದನೆಯಾಗಿದೆ. ಇದರಿಂದ ರಿಜೆಕ್ಟ್ ಆಗಿರುವ ಸಾವಿರಾರು ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಲಿದೆ. ಕಾರ್ಮಿಕರಿಗೆ ನಿಜವಾದ ಪ್ರಯೋಜನ ಸಿಗುವವರೆಗೆ BMS ತನ್ನ ಹೋರಾಟವನ್ನು ಮುಂದುವರಿಸಲಿದೆ” ಎಂದು ಕುಮಾರನಾಥ ಶೆಟ್ಟಿ ಕಲ್ಮಂಜ ತಿಳಿಸಿದ್ದಾರೆ.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಪುರಂದರ ಶೆಟ್ಟಿ ಕುಂಬ್ರ, ಕಾರ್ಮಿಕ ಇಲಾಖೆ ಹಾಗೂ ಕಲ್ಯಾಣ ಮಂಡಳಿಯ ಅಧಿಕಾರಿಗಳು ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here