






ಬೆಳ್ತಂಗಡಿ: ಹಿಂದಿನ ಪ್ರಕರಣವೊಂದರೆ ವೀಡಿಯೋ ವೈರಲ್ ಆಗಿ ಭಕ್ತರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನೇಮಕವಾಗಿದ್ದ ಅರ್ಚಕ ಶೇಷಗಿರಿ ಭಟ್ ಅವರನ್ನು ವ್ಯವಸ್ಥಾಪನಾ ಸಮಿತಿ ಕೈ ಬಿಟ್ಟ ಪ್ರಕರಣ ನಡೆದಿದೆ. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೂರು ಮಂದಿ ಆರ್ಚಕರಿದ್ದರು. ಅವರಲ್ಲಿ ಒಬ್ಬ ಅರ್ಚಕರು ಬೇರೆ ದೇವಸ್ಥಾನಕ್ಕೆ ಅರ್ಚಕರಾಗಿ ಹೋಗಿದ್ದರು. ಅವರ ಸ್ಥಾನಕ್ಕೆ ಅವಕಾಶ ಕೇಳಿಕೊಂಡು ಬಂದ ಶಿರಸಿಯ ಶೇಷಗಿರಿ ಭಟ್ ಎಂಬ ಯುವ ಅರ್ಚಕರೊಬ್ಬರನ್ನು ನೇಮಕಗೊಳಿಸಲು ಡಾ. ದೇವಿಪ್ರಸಾದ್ ಕಾನತ್ತೂರ್ ನೇತೃತ್ವದ ವ್ಯವಸ್ಥಾಪನಾ ಸಮಿತಿ ನಿರ್ಧರಿಸಿತ್ತು. ಅವರನ್ನು ದೇವಳದ ತಂತ್ರಿಗಳಾದ ಕಮ್ಮಿಂಜೆ ನಾಗೇಶ ತಂತ್ರಿಗಳವರಲ್ಲಿಗೆ ಸೆ.೯ರಂದು ಸಂಜೆ ಕರೆದುಕೊಂಡು ಹೋಗಲಾಗಿತ್ತು.


ಅಲ್ಲಿ ಆ ಅರ್ಚಕರ ಸಂದರ್ಶನ ನಡೆಸಿದ ನಾಗೇಶ ತಂತ್ರಿಗಳು ಮತ್ತು ಕಾರ್ತಿಕ್ ತಂತ್ರಿಗಳು ಇವರಿಗೆ ಇನ್ನೂ ಒಂದು ತಿಂಗಳು ತರಬೇತಿ ಬೇಕು. ಆದ್ದರಿಂದ ಅವರಿಗೆ ಈಗ ಮುಖ್ಯ ದೇವರ ಪೂಜೆಯ ಅವಕಾಶ ಕೊಡುವುದು ಬೇಡ. ಗುಡಿಗಳಲ್ಲಿ ಮಾತ್ರ ಪೂಜೆ ಮಾಡಲಿ ಎಂದು ಸಲಹೆ ನೀಡಿದ್ದರು. ಹೊಸ ಅರ್ಚಕರು ತಂತ್ರಿಗಳದು ಆಶೀರ್ವಾದ ಪಡೆದು ಬಂದಿರುವ ಬಗ್ಗೆ ವ್ಯವಸ್ಥಾಪನಾ ಸಮಿತಿಯವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಇದು ಪ್ರಚಾರಗೊಂಡ ಕೆಲವೇ ಹೊತ್ತಲ್ಲಿ ಆರ್ಚಕ ಶೇಷಗಿರಿ ಭಟ್ ಅವರು ಬೆಳ್ತಂಗಡಿ ತಾಲೂಕಿನ ತೆಕ್ಕಾರು ಎಂಬಲ್ಲಿಯ ದೇವಸ್ಥಾನದ ಆರ್ಚಕರಾಗಿರುವಾಗ ಮಾಡಿದ ಪ್ರಕರಣವೊಂದರ ವೀಡಿಯೋ ಸ್ಟೋರಿ ವೈರಲ್ ಆಯಿತು. ಶೇಷಗಿರಿ ಭಟ್ ಅವರು ತೆಕ್ಕಾರು ದೇವಸ್ಥಾನಕ್ಕೆ ಬರುತ್ತಿದ್ದ ಯುವತಿಯೋರ್ವಳನ್ನು ಪ್ರೀತಿಸಿ ಮದುವೆಯಾಗುವಂತೆ ಒತ್ತಾಯಿದ್ದಲ್ಲದೆ ಆಕೆಯ ಮನೆಗೆ ರಾತ್ರಿ ವೇಳೆ ತಲವಾರು ಹಿಡಿದುಕೊಂಡು ಬಂದು ಬೆದರಿಕೆ ಒಡ್ಡಿದ್ದ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದ ವಿಚಾರ ವ್ಯಾಪಕ ಪ್ರಚಾರವಾಯಿತು.
ಇದರ ಪರಿಣಾಮವಾಗಿ ಇಂತಹ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸಿದ್ದು ಯಾಕೆ ಎಂದು ಕೇಳಿ ಸಾಮಾಜಿಕ ಜಾಲತಾಣದಲ್ಲಿ ಭಕ್ತರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸತೊಡಗಿದರಲ್ಲದೆ ವ್ಯವಸ್ಥಾಪನಾ ಸಮಿತಿಯನ್ನು ಪ್ರಶ್ನಿಸತೊಡಗಿದರು. ಅರ್ಚಕರ ಹಿನ್ನೆಲೆ ತಿಳಿಯದೆ ನೇಮಕ ಮಾಡಿದ್ದ ವ್ಯವಸ್ಥಾಪನಾ ಸಮಿತಿಯವರು ವಿಷಯ ತಿಳಿದ ಮೇಲೆ ಶೇಷಗಿರಿ ಭಟ್ ಅವರನ್ನು ಕೈಬಿಡಲು ನಿರ್ಧರಿಸಿದರು. ವಿಷಯ ತಿಳಿದ ಬಳಿಕ ತಂತ್ರಿಗಳವರು ಕೂಡ ಆ ಅರ್ಚಕರು ಪಂಜ ದೇವಸ್ಥಾನಕ್ಕೆ ಬೇಡವೆಂಬ ಸಲಹೆಯನ್ನು ವ್ಯವಸ್ಥಾಪನಾ ಸಮಿತಿಯವರಿಗೆ ನೀಡಿದ್ದರು. ಬಳಿಕ ಅರ್ಚಕರ ನೇಮಕವನ್ನು ರದ್ದು ಮಾಡಲು ವ್ಯವಸ್ಥಾಪನಾ ಸಮಿತಿಯವರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.









