






ಅಳದಂಗಡಿ : ತುಳುವ ಮಹಾಸಭಾ ಶತಮಾನೋತ್ಸವದ ಹೊಸ್ತಿಲಲ್ಲಿದ್ದು,ಹಲವು ದೇಶಗಳಲ್ಲಿ ಸಮಿತಿ ರಚನೆಯಾಗುತ್ತಿದೆ. ಬೆಳ್ತಂಗಡಿ ತಾಲೂಕಿನ ಅಧ್ಯಕ್ಷ ಕಾರ್ಯದರ್ಶಿಯ ಆಯ್ಕೆ ನಡೆದಿದ್ದು ಅಳದಂಗಡಿ ಸೋಮನಾಥೇಶ್ವರಿ ದೇವಾಲಯದ ವಠಾರದಲ್ಲಿ ಸೆ.5ರಂದು ವಿಶೇಷ ಸಭೆ ನಡೆಸಲಾಯಿತು.
ಈ ವೇಳೆ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾಗಿ ಗಂಗಾಧರ ಮಿತ್ತಮಾರು,ಪ್ರಧಾನ ಹಾಗೂ ಪ್ರಧಾನ ಸಂಚಾಲಕರಾಗಿ ನಿತ್ಯಾನಂದ ಶೆಟ್ಟಿ ನಾವುರಯವರನ್ನು ನೇಮಕ ಮಾಡಲಾಯಿತು. ಬಾಕಿ ಪದಾದಿಕಾರಿಗಳನ್ನು ಮುಂದಿನ ದಿನಗಳಲ್ಲಿ ನೇಮಿಸುವ ನಿರ್ಧಾರ ಕೈಗೊಳ್ಳಲಾಯಿತು.
ಅಳದಂಗಡಿ ಅರಸರಾದ ಡಾ.ಪದ್ಮಪ್ರಸಾದ್ ಅಜಿಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ತುಳುವ ಮಹಾಸಭಾದ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ” ತುಳು ಭಾಷೆ, ಸಂಸ್ಕೃತಿ, ಅಸ್ಮಿತೆಯನ್ನು ಜಾಗತಿಕಮಟ್ಟಕ್ಕೆ ಪಸರಿಸುವ ನಿಟ್ಟಿನಲ್ಲಿ 1928ರಲ್ಲಿ ಉಡುಪಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಶ್ವ ತುಳುವ ಮಹಾಸಭಾ ಶತಮಾನೋತ್ಸವದ ಹೊಸ್ತಿಲಲ್ಲಿದೆ. ಇದೀಗ ವಿವಿಧ ರಾಜ್ಯ ಮಾತ್ರವಲ್ಲದೇ 19 ದೇಶಗಳಲ್ಲೂ ತುಳುವ ಮಹಾಸಭಾ ಸ್ಥಾಪನೆಯಾಗಿದೆ.ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ತುಳುವರು ಒಗ್ಗಟ್ಟಾಗಬೇಕು”ಎಂದರು.


ತುಳುವ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಅಜಿಲರು ಸುದ್ದಿಯೊಂದಿಗೆ ಮಾತನಾಡಿ” ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಮತ್ತು ರಾಜ್ಯದ ಎರಡನೇ ಭಾಷೆಯಾಗಿ ಘೋಷಿಸಬೇಕು.ಸೆ.18ರಂದು ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ನಾವು ಮನವಿ ಮಾಡುತ್ತೇವೆ. ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಭಯಭೀತರಾಗಿರುವ ತುಳುವರೊಂದಿಗೆ ಮಹಾಸಭಾ ನಿಲ್ಲಬೇಕು”ಎಂದರು.
ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕ ರಾಜೇಶ್ ಆಳ್ವ ಮಾತನಾಡಿ, ತುಳು ಭಾಷೆ ಮಾತ್ರವಲ್ಲ, ಅದೊಂದು ವಿದ್ಯೆ ಸಂಸ್ಕಾರ. ತುಳುನಾಡಿನ ಸಂಸ್ಕೃತಿ ಆಚಾರ ವಿಚಾರವಾಗಿದೆ ಎಂದರು.
ಮಹಾಸಭಾ ಗೋವಾ ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು ಮಾತನಾಡಿ, ತುಳುವ ಎನ್ನಲು ನಮಗೆ ಹೆಮ್ಮೆಯಿದೆ. ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಒಂದುಗೂಡಿಸುವ ಕಾರ್ಯ ಮಹಾಸಭಾದ ಮೂಲಕವಾಗುತ್ತಿದೆ ಎಂದರು.
ಸಭೆಯಲ್ಲಿ ದಿವಾ ಕೊಕ್ಕಡ, ಯದುಪತಿ ಗೌಡ, ಶೈಲೇಶ್ ಆರ್ ಜೆ, ವಿಜಯ ಕುಮಾರ್ ಮುಂತಾದವರು ಭಾಗಿಯಾದರು









