






ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಇದೀಗ ಮತ್ತೆ ಕಾಡಾನೆಗಳು ಕೃಷಿ ತೋಟಕ್ಕೆ ಲಗ್ಗೆ ಇಡುತ್ತಿರುವುದು ತೀವ್ರಗೊಳ್ಳುತ್ತಿದೆ. ಕಾಡಾನೆ ಕಾಡಿಗಟ್ಟಲು ರಚಿಸಲಾಗಿರುವ ಆನೆ ಕಾರ್ಯಪಡೆಯಲ್ಲಿ ಇರುವುದು ಬರೇ ೨೫ ಸಿಬ್ಬಂದಿ. ಆದರೆ ಜಿಲ್ಲೆಯಲ್ಲಿ ಆನೆಗಳ ಸಂಖ್ಯೆ ಸಿಬ್ಬಂದಿಗಳಿಗಿಂತ ಮೂರು ಪಟ್ಟು ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಕಾಡಾನೆಗಳು ನಿರಂತರವಾಗಿ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ಹಾನಿ ಮಾಡುವ ಜೊತೆಗೆ ಮಾನವ ಮತ್ತು ಕಾಡುಪ್ರಾಣಿ ನಡುವಿನ ಸಂಘರ್ಷಕ್ಕೂ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಪ್ರತೀ ವರ್ಷ ಕಾಡಾನೆ ದಾಳಿಗೆ ಜೀವ ಹಾನಿಯಾಗುತ್ತಿರುವುದು ಮುಂದುವರಿದಿದೆ. ಕಾಡಾನೆಗಳ ನಿಯಂತ್ರಣಕ್ಕೆ ಮತ್ತು ಅವುಗಳನ್ನು ಕಾಡಿಗಟ್ಟಲು ರಚನೆಗೊಂಡಿರುವ ಆನೆ ಕಾರ್ಯಪಡೆಯಲ್ಲಿ ಇರುವ ಸಿಬ್ಬಂದಿ ಸಂಖ್ಯೆ ಬಹಳ ಕಡಿಮೆ ಇದೆ. ಸುಳ್ಯವನ್ನು ಕೇಂದ್ರವಾಗಿರಿಸಿಕೊಂಡು ದ.ಕ. ಜಿಲ್ಲೆಗೆ ಮಂಜೂರಾಗಿ ಕಾರ್ಯ ನಿರ್ವಹಿಸುತ್ತಿರುವ ಆನೆ ಕಾರ್ಯಪಡೆಯಲ್ಲಿ ಪ್ರಸ್ತುತ ೨೫ ಮಂದಿ ಸಿಬ್ಬಂದಿಗಳಿದ್ದಾರೆ. ಕಾರ್ಯಪಡೆ ಎರಡು ಕಡೆ ಕಾರ್ಯಾಚರಿಸುತ್ತಿದ್ದು ಸುಳ್ಯದಲ್ಲಿ ೧೩ ಮಂದಿ ಹಾಗೂ ಉಪ್ಪಿನಂಗಡಿಯಲ್ಲಿ ೧೨ ಮಂದಿ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಎರಡೂ ಕಡೆಯೂ ಒಂದೊಂದು ಥಾರ್ ಜೀಪು ಒದಗಿಸಲಾಗಿದೆ. ಈ ತಂಡದ ಜೊತೆ ಅರಣ್ಯ ಇಲಾಖೆಯ ಓರ್ವ ಡಿಆರ್ಎಫ್ ಮತ್ತು ಇಬ್ಬರು ಫಾರೆಸ್ಟ್ ಸಿಬ್ಬಂದಿ ಇದ್ದಾರೆ.
ಕಾರ್ಯಪೆಡೆಗೆ ಬೇಕಿದೆ ಇನ್ನಷ್ಟು ಬಲ: ದ.ಕ. ಜಿಲ್ಲೆಯಲ್ಲಿ ಸುಮಾರು ೮೦ರಷ್ಟು ಕಾಡಾನೆಗಳು ಓಡಾಟ ನಡೆಸುತ್ತಿದೆ ಎಂದು ಅಂದಾಜಿಸಲಾಗಿದೆ. ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕಿನ ಬಹುತೇಕ ಹೆಚ್ಚಿನ ಗ್ರಾಮಗಳು ಕಾಡಾನೆ ಹಾವಳಿಗೊಳಗಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿರುವ ಇಟಿಎಫ್ ತಂಡ ಎರಡು ಕಡೆಯಲ್ಲಿ ಕೇಂದ್ರೀಕರಿಸಿ ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳ, ಸಿಬ್ಬಂದಿ ಸಹಯೋಗದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುದ ಕಾರ್ಯಾಚರಣೆ ನಡೆಸುತ್ತಿದೆ.


ಆದರೆ ಇತ್ತೀಚೆಗೆ ಕಾಡಾನೆಗಳು ಕೃಷಿ ತೋಟಕ್ಕೆ ಲಗ್ಗೆ ಇಡುತ್ತಿರುವುದು ಹೆಚ್ಚಳಗೊಳ್ಳುತ್ತಿರುವುದುರಿಂದ ಆನೆ ಕಾರ್ಯಪಡೆಗೆ ಇನ್ನಷ್ಟು ಬಲ ನೀಡಬೇಕಾಗಿದ್ದು ಇನ್ನಷ್ಟು ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಿ ಪ್ರತೀ ತಾಲೂಕಿನಲ್ಲಿ ಕಾರ್ಯಾಚರಣೆ ತಂಡ ರಚಿಸಿ ಆಯಾ ತಾಲೂಕಿನ ಕಾಡಾನೆ ಹಾವಳಿ ಇರುವ ಗ್ರಾಮಕ್ಕೆ ತಕ್ಷಣದ ಕಾರ್ಯಾಚರಣೆಗೆ ಲಭ್ಯರಾಗುವಂತೆ ಕ್ರಮ ವಹಿಸಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ.
ಕಾಡಾನೆಯಿಂದ ಕೃಷಿ ನಾಶ ಹೆಚ್ಚಳ: ಸುಳ್ಯ, ಕಡಬ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಕಾಡಾನೆಯಿಂದ ಕೃಷಿ ಹಾನಿಯಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ ೧,೭೦೦ಕ್ಕೂ ಅಧಿಕ ಸ್ಥಳಗಳಲ್ಲಿ ಕೃಷಿ ಹಾನಿ ಪ್ರಕರಣ ನಡೆದಿದೆ. ಈ ನಡುವೆ ಕಾಡಾನೆಗಳು ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಅಪಾರ ಕೃಷಿ ನಾಶಪಡಿಸುತ್ತಿರುವುದು ಕೃಷಿಕರನ್ನು ಆತಂಕಕ್ಕೆ ದೂಡಿದೆ.
ಐದು ವರ್ಷದಲ್ಲಿ ೭ ಸಾವು, ಒಂದೇ ಆನೆ ಸೆರೆ!: ೨೦೨೨ರ ಡಿಸೆಂಬರ್ ೩೧ರಂದು ಕಡಬ ತಾಲೂಕಿನ ಶಿರಾಡಿಯಲ್ಲಿ ಕಾಡಾನೆ ದಾಳಿಗೆ ತಿಮ್ಮಪ್ಪ ಎಂಬವರು ಮೃತಪಟ್ಟಿದ್ದರು. ೨೦೨೩ರ ಮಾರ್ಚ್ ೨೦ರಂದು ಕಡಬ ತಾಲೂಕಿನ ರೆಂಜಿಲಾಡಿ ಬಳಿ ಕಾಡಾನೆ ದಾಳಿಗೆ ರಂಜಿತಾ (೨೧) ಹಾಗೂ ರಮೇಶ್ ರೈ (೫೫) ಮೃತಪಟ್ಟಿದ್ದರೆ ೨೦೨೩ರ ಸೆಪ್ಟೆಂಬರ್ ೨೮ರಂದು ಐತ್ತೂರಿನ ಚೋಮ ಎಂಬವರು ಕಾಡಾನೆ ದಾಳಿಯಿಂದ ಗಾಯಗೊಂಡು ಕೆಲವು ದಿನದ ಬಳಿಕ ಸಾವನ್ನಪ್ಪಿದ್ದರು. ೨೦೨೫ರ ಏಪ್ರಿಲ್ ೨೯ರರಂದು ಹತ್ಯಡ್ಕದಲ್ಲಿ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ೬೫ ವರ್ಷದ ಸೆಲ್ಲಮ್ಮ ಆನೆ ದಾಳಿಗೆ ಬಲಿಯಾಗಿದ್ದರು. ೨೦೨೫ರ ಜುಲೈ ೧೮ರಂದು ಸೌತಡ್ಕ ಬಳಿ ೬೦ ವರ್ಷದ ಬಾಲಕೃಷ್ಣ ಶೆಟ್ಟಿ ಆನೆ ದಾಳಿಯಿಂದ ಮೃತಪಟ್ಟಿದ್ದರು. ೨೦೨೬ರ ಆಗಸ್ಟ್ ೧ರಂದು ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದಲ್ಲಿ ಆನೆ ದಾಳಿಗೆ ೫೩ ವರ್ಷದ ಬಾಲಕೃಷ್ಣ ಗೌಡ ಮೃತಪಟ್ಟಿದ್ದರು. ೨೦೨೩ರಲ್ಲಿ ಕಡಬದ ರೆಂಜಿಲಾಡಿಯಲ್ಲಿ ಕಾಡಾನೆ ದಾಳಿಗೆ ಇಬ್ಬರು ಸಾವನ್ನಪ್ಪಿದ ವೇಳೆ ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಅಂದು ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಿ ದಾಳಿ ನಡೆಸಿದ ಒಂದು ಆನೆಯನ್ನು ಸೆರೆ ಹಿಡಿದು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕದಲ್ಲಿ ಒಂದು ಬಾರಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿದ್ದರೂ ಅದು ಮುಂದುವರಿದಿರಲಿಲ್ಲ. ಉಳಿದಂತೆ ಕಾಡಾನೆ ಕಂಡು ಬರುವ ವೇಳೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಾತ್ರವೇ ಮುಂದುವರಿದಿದೆ. ಕಾಡಾನೆ ಹಾವಳಿ ತಡೆಗೆ ಕಂದಕ ನಿರ್ಮಾಣ ಮತ್ತು ಸೋಲಾರ್ ಬೇಲಿ ನಿರ್ಮಾಣ ಮಾಡಲಾಗುತ್ತಿದೆ.
ಪ್ರಸ್ತಾವನೆ ಸಲ್ಲಿಸಲಾಗಿದೆ: ದ.ಕ. ಜಿಲ್ಲೆಯ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹಲವು ವರ್ಷಗಳಿಂದ ಇದೆ. ಪ್ರಸ್ತುತ ಆನೆ ಕಾರ್ಯಪಡೆಯಲ್ಲಿ ೨೫ ಮಂದಿ ಇದ್ದು ಇಲ್ಲಿಗೆ ಇನ್ನಷ್ಟು ಸಿಬ್ಬಂದಿ, ಘಟಕ ಬೇಕಾಗಿರುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿzವೆ. ಸ್ಥಳೀಯವಾಗಿಯೂ ಸ್ಥಳೀಯರ ತಂಡ ರಚಿಸಿ ಅವರ ಸಹಕಾರ ಪಡೆಯುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ರವಿಶಂಕರ್ ಪ್ರತಿಕ್ರಿಯಿಸಿದ್ದಾರೆ.








